ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದ್ದು,ಮೂರನೇ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಯೋಜನಾ ಸಭೆಯಲ್ಲಿ ಮಾತನಾಡಿದ ಅವರು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಇಡೀ ವಾತಾವರಣ ಬಿಜೆಪಿ ಪರವಾಗಿದೆ. ಪಂಚ ರಾಜ್ಯಗಳ ಚುನಾವಣೆಗಳ ಫಲಿತಾಂಶ ನೋಡಿದರೆ ನಮ್ಮ ಪಕ್ಷಕ್ಕೆ ಅನುಕೂಲಕರವಾಗಿದೆ. ದೇಶದಲ್ಲಿ ಕಾಂಗ್ರೆಸ್ ಮತ್ತೆ ಮೇಲೇಳುತ್ತದೆ ಎಂಬ ಚರ್ಚೆ ಇತ್ತು. ಆದರೆ, ಈ ಫಲಿತಾಂಶವು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳಿಗೆ ಮರ್ಮಾಘಾತವನ್ನುಂಟು ಮಾಡಿದೆ.
ಯಾರೂ ಕೂಡ ಊಹಿಸದ ರೀತಿಯಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಈ ಮೂಲಕ ರಾಜ್ಯ ಹಾಗೂ ದೇಶದ ಜನತೆಗೆ ಸ್ಪಷ್ಟ ಸಂದೇಶ ಸಿಕ್ಕಿದೆ. ದೇಶದ ಜನತೆ ಕಾಂಗ್ರೆಸ್ ಗಿಮಿಕ್ ಗ್ಯಾರಂಟಿಯನ್ನು ನಂಬಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನೆ ಮಾಡಿದ್ದಾರೆ. ದೇಶ ಅಭಿವೃದ್ಧಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿಯೇ ಪಕ್ಕಾ ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಹೇಳಿದರು.
ಆಡಳಿತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿಫಲ ನೀತಿಯಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಮತ್ತೊಂದು ಕಡೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ವಿಫಲವಾಗಿದೆ. ವಿತ್ತ ಸಚಿವರಾಗಿ 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಎಲ್ಲವೂ ಸಂಪೂರ್ಣ ವಿಫಲವಾಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಶ್ರೀರಾಮನನ್ನು ಒಪ್ಪದ ಕಾಂಗ್ರೆಸ್
ಜನವರಿ 22ರಂದು ಕೋಟ್ಯಂತರ ಜನ ಹಿಂದುಗಳು ಅಯೋಧ್ಯೆಯ ರಾಮಜನ್ಮಭೂಮಿಗೆ ಬರಲಿದ್ದಾರೆ. ಅಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಹಬ್ಬದ ವಾತಾವರಣ ಇದೆ. ಮನೆ ಮನೆಗೆ ಪವಿತ್ರ ಮಂತ್ರಾಕ್ಷತೆ ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಮನೆಗಳಲ್ಲಿ ದೀಪ ಹಚ್ಚುವಂತೆ ಮನವಿ ಮಾಡಿದಾಗ ಜನರು ಖುಷಿಯಿಂದ ಒಪ್ಪಿದ್ದಾರೆ. ಆದರೆ, ಈ ಕಾಂಗ್ರೆಸ್‌ನವರು ಭಗವಾನ್ ಶ್ರೀರಾಮನ ಒಪ್ಪಲು ತಯಾರಿಲ್ಲ. ಕಾಂಗ್ರೆಸ್‌ನವರು ವಿಧಿ ಇಲ್ಲದೆ ಕರ್ನಾಟಕದಲ್ಲಿ ಸುತ್ತೋಲೆ ಹೊರಡಿಸಿ ಪೂಜೆ ಮಾಡಲು ಹೇಳಿದ್ದಾರೆ. ಇದು ಶ್ರೀ ರಾಮನಿಗೆ ಸಂದ ಜಯ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.