Thursday, December 19, 2024

ಮೆಣಸಿನಕಾಯಿ ಬೆಳೆಗಳಿಗೆ 2.75 ಟಿಎಂಸಿ ನೀರು ಹರಿಸಲು ತೀರ್ಮಾನ: ಡಿ.ಕೆ. ಶಿವಕುಮಾರ್

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆ ಉಳಿಸಲು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ 2.75 ಟಿಎಂಸಿ ನೀರನ್ನು ಹರಿಸಲು ತೀರ್ಮಾನಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು ತಕ್ಷಣದಿಂದಲೇ ನೀರು ಬಿಡುಗಡೆ ಮಾಡಲಾಗುವುದು. 75 ಕಿ.ಮೀ. ನೀರು ಹರಿಯಬೇಕಿದೆ. ಎರಡು ಮೂರು ದಿನದಲ್ಲಿ ನೀರು ತಲುಪಬಹುದು ಎಂದು ಹೇಳಿದರು.

ಶನಿವಾರ ರಾತ್ರಿ ಕಲಬುರಗಿ, ರಾಯಚೂರು, ಬಾಗಲಕೋಟೆ, ಯಾದಗಿರಿ ಭಾಗದ ಜಿಲ್ಲಾ ಮಂತ್ರಿಗಳು, ಎಲ್ಲ ಪಕ್ಷದ ಶಾಸಕರು, ರೈತ ಮುಖಂಡರ ಜತೆ ಸಭೆ ಮಾಡಲಾಯಿತು. ಈ ಸಭೆಯಲ್ಲಿ ಜನಪ್ರತಿನಿಧಿಗಳು ವಾಸ್ತವ ಪರಿಸ್ಥಿತಿ ವಿವರಿಸಿ, ನೀರು ಬಿಡಲು ಒತ್ತಾಯಿಸಿದ್ದರು. ಹೀಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.

47 ಟಿಎಂಸಿ ನೀರು ಲಭ್ಯ ಇದೆ

“ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟು ಸೇರಿ 47 ಟಿಎಂಸಿ ನೀರು ಲಭ್ಯ ಇದೆ. ಕುಡಿಯುವ ನೀರಿಗೆ 37 ಟಿಎಂಸಿ ನೀರು, ಇತರೆ ಉದ್ದೇಶಕ್ಕೆ 3 ಟಿಎಂಸಿ ನೀರು ಬೇಕು. ನೀರು ಹರಿಸುವ ವೇಳೆ 1.5 ಟಿಎಂಸಿ ನೀರು ನಷ್ಟವಾಗುತ್ತದೆ. ಈ ಭಾಗದವರ ಒತ್ತಡಕ್ಕೆ ಈಗ 2.75 ಟಿಎಂಸಿ ನೀರು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ. ಇನ್ನೂ ಆರು ತಿಂಗಳು ನೀರು ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಈ ಬಾರಿ ಕೊನೆಯದಾಗಿ ನಾವು ರೈತರ ಜಮೀನಿಗೆ ನೀರು ಹರಿಸುತ್ತಿದ್ದೇವೆ ಎಂದು ಉತ್ತರಿಸಿದರು.

ಎಲ್ಲ ಪಕ್ಷದ ಶಾಸಕರು ಹಾಗೂ ನಮ್ಮ ಸಚಿವರು ನನ್ನ ಮೇಲೆ ಹೆಚ್ಚು ಒತ್ತಡ ಹಾಕಿದ್ದಾರೆ. ಹೀಗಾಗಿ ಅವರೆಲ್ಲರ ಜತೆಗೂಡಿ ಅಧಿಕಾರಿಗಳ ಜತೆ ಚರ್ಚೆ ಮಾಡಿ ಈ ತೀರ್ಮಾನ ಕೈಗೊಂಡಿದ್ದೇವೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

 

 

 

RELATED ARTICLES

Related Articles

TRENDING ARTICLES