ಬೆಂಗಳೂರು: ಮೆಟ್ರೋ ರೈಲು ನಿಲ್ದಾಣದಲ್ಲಿ ಹಳಿಯ ಮೇಲೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಾಲಹಳ್ಳಿ ಶುಕ್ರವಾರ ನಡೆದಿದೆ. ಕೂಡಲೇ ಸಿಬ್ಬಂದಿ ಆ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ನಡೆದ ಹಿನ್ನೆಲೆಯಲ್ಲಿ ಯಶವಂತಪುರ- ನಾಗಸಂದ್ರ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಂಜೆ 7:12ಕ್ಕೆ ಮೆಟ್ರೋ ಹಳಿಗೆ ಕೇರಳ ಮೂಲದ ಯುವಕ ಧುಮುಕಿದ್ದ. ಸದ್ಯ ಯುವಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಆತನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನ ಸ್ನೇಹಿತನನ್ನು ವಿಚಾರಣೆ ಮಾಡುತ್ತಿದ್ದಾರೆ. ರೈಲು ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸದ್ಯ ಯಶವಂತಪುರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಹೊರ ಬರುತ್ತಿದ್ದಾರೆ.
ಇದನ್ನೂ ಓದಿ: ವಿಕಲಚೇತನನ ಜೀವನಕ್ಕೆ ದಾರಿದೀಪವಾದ ಅಧಿಕಾರಿಗಳು!
ಅಬ್ಬಿಗೆರೆಯ ಫ್ಯಾಕ್ಟರಿಯೊಂದರಲ್ಲಿ ಕೇರಳ ಮೂಲದ 23 ವರ್ಷದ ಯುವಕ ಕೆಲಸ ಮಾಡುತ್ತಿದ್ದ. ಯುವಕ ರೈಲ್ವೆ ಹಳಿಗೆ ಹಾರುತ್ತಿದ್ದಂತೆ ಮೆಟ್ರೊ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಯುವಕನಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.