ಅಯೋಧ್ಯೆ : ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಅಸಂಖ್ಯಾತ ಹಿಂದೂಗಳು ಕಾತರರಾಗಿದ್ದಾರೆ.
ಭಾರತದ ಹಿರಿಮೆ ಮತ್ತು ಭವ್ಯ ಸಂಕೇತವಾಗಿರುವ ರಾಮಮಂದಿರ ರಕ್ಷಣೆಗಾಗಿ ಭಾರಿ ಭದ್ರತಾ ವ್ಯವಸ್ಥೆಯನ್ನೇ ಕೈಗೊಳ್ಳಲಾಗುತ್ತಿದೆ. 24*7 ಹೈಟೆಕ್ ಭದ್ರತಾ ವ್ಯವಸ್ಥೆ ಅಳವಡಿಸುತ್ತಿರುವುದಾಗಿ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್ ಮಹಾನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬರೋಬ್ಬರಿ 90 ಕೋಟಿ ರೂಪಾಯಿ ವೆಚ್ಚದಲ್ಲಿ ಫೂಲ್ಪ್ರೂಫ್ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದು ದಿನದ 24 ಗಂಟೆಯು ಕೆಲಸ ನಿರ್ವಹಿಸಲಿದೆ. ಈ ಫೂಲ್ಪ್ರೂಫ್ ಸೆಕ್ಯುರಿಟಿ ಸಿಸ್ಟಮ್ ಎಂದಿಗೂ ಫೇಲ್ ಆಗುವುದಿಲ್ಲ. ದೇವಾಲಯದ ಮೇಲಿನ ದಾಳಿ ಮತ್ತು ಒಳನುಗ್ಗುವಿಕೆಯನ್ನು ತಡೆಯಲು ಈ ಸಿಸ್ಟಮ್ ಅಳವಡಿಸಲಾಗುತ್ತಿದೆ. ಭದ್ರತಾ ಸಾಧನಗಳನ್ನು ಅಳವಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಉಪವಾಸ ವ್ರತ
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಅದ್ಧೂರಿಯಾಗಿ ನೆರವೇರಲಿದೆ. ಅಂದೇ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಜೊತೆಗೆ ವಿಶೇಷ ಹೋಮ-ಹವನ ಜರುಗಲಿದೆ. ವಿಶೇಷವೆಂದರೆ, ಉದ್ಘಾಟನೆ ದಿನ ಪ್ರಧಾನಿ ನರೇಂದ್ರ ಮೋದಿಯವರು ಉಪವಾಸ ವ್ರತ ಕೈಗೊಳ್ಳಲಿದ್ದಾರೆ. ಅದೊಂದು ದಿನ ಏನೂ ತಿನ್ನುವುದು ಬೇಡ ಎಂದು ಮೋದಿ ನಿರ್ಧರಿಸಿದ್ದಾರೆ.