ಉಡುಪಿ : ಅಯೋಧ್ಯೆಯಲ್ಲಿ ಇರುವುದು ಬಿಜೆಪಿ ಪಕ್ಷದ ರಾಮ ಮಂದಿರ ಎಂದಿರುವ ಮಾಜಿ ಸಚಿವ ಹೆಚ್. ಆಂಜನೇಯ ಹೇಳಿಕೆಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಾಮ ಬೇರೆಯಲ್ಲ.. ಕೃಷ್ಣ ಬೇರೆಯಲ್ಲ. ದೇವರು ಮಂದಿರದಲ್ಲಿ ಮಾತ್ರವಲ್ಲ, ಎಲ್ಲರೊಳಗಿದ್ದಾನೆ. ಸಿದ್ದರಾಮಯ್ಯರೊಳಗೂ ಇದ್ದಾನೆ ಎಂದು ಹೇಳಿದ್ದಾರೆ.
ಬಿಜೆಪಿ ಮಂದಿರವೆಂದು ಯಾಕೆ ಹಾಗೆ ಅಂದುಕೊಳ್ಳಬೇಕು? ನಾವು ಭಾರತೀಯರು, ಈ ರಾಮಮಂದಿರ ಎಲ್ಲರದ್ದೂ. ಬಿಜೆಪಿಯವರು ಮಾತ್ರ ದೇಣಿಗೆ ಕೊಟ್ಟದ್ದಾ? ಇದು ಪಕ್ಷದ ಮಂದಿರ ಹೇಗೆ ಸಾಧ್ಯ? ಪಕ್ಷದ, ಸರಕಾರದ ದೇಣಿಗೆಯಿಂದ ಮಂದಿರ ಕಟ್ಟಿದ್ದಲ್ಲ. ಜಗತ್ತಿನ ಭಕ್ತರ ದೇಣಿಗೆಯಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.
ಪ್ರಾಣ ಪ್ರತಿಷ್ಠೆಗೆ ಸಾರ್ವತ್ರಿಕ ರಜೆ
ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಸಾರ್ವತ್ರಿಕ ರಜೆ ಕೋರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಾಣ ಪ್ರತಿಷ್ಠೆ ಜಗತ್ತಿನ ಉತ್ಸವ. ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರು ಇದ್ದಾರೆ. ಎಲ್ಲರ ಭಾವನೆ ಮನ್ನಿಸಿ, ಗೌರವಿಸಿ ರಜೆ ಘೋಷಿಸಬೇಕು. ಉಡುಪಿ ಶಾಸಕರು ರಜೆ ಕೋರಿದ್ದಾರೆ, ನಾನು ರಜೆಯನ್ನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.