ಕೇರಳ : ಕೇರಳದಲ್ಲಿ I.N.D.I.A ಮೈತ್ರಿಕೂಟವನ್ನು ಬಿಜೆಪಿ ಸೋಲಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದರು.
ಕೇರಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ I.N.D.I.A ಒಕ್ಕೂಟವು ನಮ್ಮ ನಂಬಿಕೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು.
ಇಂಡಿಯಾ ಮೈತ್ರಿ ಕೂಟವು ನಮ್ಮ ನಂಬಿಕೆಯನ್ನು ಘಾಸಿಗೊಳಿಸುತ್ತಲೇ ಇರುತ್ತದೆ. ಅವರು ನಮ್ಮ ದೇವಸ್ಥಾನಗಳು ಮತ್ತು ಹಬ್ಬಗಳನ್ನು ಲೂಟಿಗೆ ದಾರಿ ಮಾಡಿಕೊಂಡಿದ್ದಾರೆ. ‘ತ್ರಿಶೂರ್ ಪೂರಂ’ನಲ್ಲಿ ನಡೆಯುತ್ತಿರುವ ರಾಜಕೀಯ ದುರದೃಷ್ಟಕರ. ಶಬರಿಮಲೆಯಲ್ಲಿ ನಡೆದಿರುವ ದುರಾಡಳಿತದಿಂದ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಇಲ್ಲಿಯ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಪ್ರಧಾನಿ ಮೋದಿ ಕುಟುಕಿದರು.
ಲೂಟಿಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು
ಇಂದು ದೇಶದಲ್ಲಿ ದೊಡ್ಡ ದೊಡ್ಡ ರಸ್ತೆಗಳು ನಿರ್ಮಾಣವಾಗುತ್ತಿವೆ. ಆಧುನಿಕ ರೂಪದಲ್ಲಿ ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಆದರೆ, ಮೋದಿಯವರನ್ನು ವಿರೋಧಿಸುತ್ತೇವೆ ಎಂಬ ಕಾರಣಕ್ಕೆ ಇಂಡಿಯಾ ಮೈತ್ರಿಕೂಟ ಸರ್ಕಾರ ಇಲ್ಲಿ ಯಾವುದೇ ಕೆಲಸ ನಡೆಯಲು ಬಿಡುತ್ತಿಲ್ಲ. ಲೂಟಿಗೆ ಕೇರಳದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಬೇಕು. ಕೇಂದ್ರ ಸರ್ಕಾರದಿಂದ ಬಡವರಿಗೆ ಮತ್ತು ಮೂಲಸೌಕರ್ಯಕ್ಕೆ ಸಿಗುತ್ತಿರುವ ಹಣದ ಬಗ್ಗೆ ಯಾರೂ ಪ್ರಶ್ನಿಸುವುದು ಅವರಿಗೆ ಇಷ್ಟವಿಲ್ಲ. ಈ ಮೂಲಕ ಕೇಂದ್ರದ ಯೋಜನೆಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.