ಬೆಂಗಳೂರು: ಈ ವರ್ಷ ಕನ್ನಡ ಚಿತ್ರರಂಗದ ಹಲವು ಧ್ರುವತಾರೆಗಳು ಕಣ್ಮರೆಯಾಗಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಸಾವು ಎಂತಹ ವ್ಯಕ್ತಿ, ಸಮಾಜವನ್ನೇ ಅಲ್ಲಾಡಿಸಿ ಬಿಡುತ್ತಾದೆ ಎಂಬುವುದಕ್ಕೆ ಈ ವರ್ಷಕ್ಕೆ ಸಾಕ್ಷಿಯಾಗಿದೆ.
ನಟಿ ಲೀಲಾವತಿ
ಬಹಳ ವರ್ಷಗಳಿಂದ ಚಿತ್ರರಂಗದಿಂದ ದೂರಾಗಿ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ತಮ್ಮ ಪುತ್ರ ವಿನೋದ್ ರಾಜ್ ಅವರ ಆರೈಕೆಯಲ್ಲಿ ಜೀವನ ಕಳೆಯುತ್ತಿದ್ದರು. ಅವರು 8 ಡಿಸೆಂಬರ್ ರಂದು ಕೊನೆ ಉಸಿರೆಳೆದಿದ್ದಾರೆ.
ಇವರು ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದು ಕನ್ನಡದ ಕಂದ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಜೀವಮಾನ ಸಾಧನೆಗಾಗಿ 1999ರಲ್ಲಿ ಲೀಲಾವತಿ ಅವರು ಡಾ. ರಾಜ್ಕುಮಾರ್ ಪ್ರಶಸ್ತಿ ಪಡೆದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು.
1953ರಲ್ಲಿ ಬಿಡುಗಡೆಯಾಗಿದ್ದ ‘ಚಂಚಲ ಕುಮಾರಿ’ ಚಿತ್ರದ ಮೂಲಕ ಲೀಲಾವತಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಕನ್ನಡ, ತೆಲುಗು, ಮಲಯಾಳಂ, ತುಳು ಮುಂತಾದ ಭಾಷೆಗಳಲ್ಲಿ ನಟಿಸಿ ಲೀಲಾವತಿ ಸೈ ಎನಿಸಿಕೊಂಡರು. ‘ಮದುವೆ ಮಾಡಿನೋಡು’ ಮತ್ತು ‘ಸಂತ ತುಕಾರಾಮ್’ ಸಿನಿಮಾಗಳಿಗೆ ಲೀಲಾವತಿ ಅವರು 2 ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
ಸ್ಪಂದನಾ ವಿಜಯ್
ಈ ವರ್ಷ ತೀವ್ರ ಆಘಾತ ಉಂಟು ಮಾಡಿದ ಸಾವುಗಳಲ್ಲಿ ಪ್ರಮುಖವಾದು, ಸ್ಪಂದನಾ ರಾಘವೇಂದ್ರ ಅವರ ಸಾವು. ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಥಾಯ್ಲೆಂಡ್ಗೆ ಸಹೋದರರ ಜೊತೆ ಪ್ರವಾಸಕ್ಕೆ ತೆರಳಿದ್ದ ವೇಳೆ ಆಗಸ್ಟ್ 7ರಂದು ಹೃದಯಾಘಾತಕ್ಕೆ ಈಡಾಗಿ ನಿಧನ ಹೊಂದಿದರು. ಈ ಸಾವು ವಿಜಯ್ ರಾಘವೇಂದ್ರ ಅವರಿಗೆ ಹಾಗೂ ಅವರ ಕುಟುಂಬಕ್ಕೆ ತೀವ್ರ ಆಘಾತ ತಂದಿತ್ತು.
ನಟ ಸಂಪತ್ ಜಯರಾಂ
ಕಿರುತೆರೆ ಮೂಲಕ ಜನಪ್ರಿಯವಾಗಿ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದ ಸಂಪತ್ ಜಯರಾಂ ಇದೇ ವರ್ಷದ ಆರಂಭದಲ್ಲಿ ನಿಧನ ಹೊಂದಿದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಕೆಸಿಎನ್ ಮೋಹನ್
ನಿರ್ಮಾಪಕ, ನವರಂಗ್ ಸೇರಿದಂತೆ ಇನ್ನೂ ಕೆಲವು ಚಿತ್ರಮಂದಿರಗಳ ಮಾಲೀಕರಾಗಿದ್ದ ಕೆಸಿಎನ್ ಮೋಹನ್ ಅವರು ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರು. ಸಿನಿಮಾ ವಿತರಕರಾಗಿಯೂ ಮೋಹನ್ ಕೆಲಸ ಮಾಡಿದ್ದರು. ಬೆಂಗಳೂರಿನ ಶ್ರೀಮಂತ ಚಿತ್ರಮಂದಿರ ಮಾಲೀಕರಲ್ಲಿ ಒಬ್ಬರಾಗಿದ್ದ ಇವರು ಜುಲೈ 2 ರಂದು ಅನಾರೋಗ್ಯದಿಂದ ನಿಧನ ಹೊಂದಿದರು.
ನಿರ್ದೇಶಕ ಭಗವಾನ್
ದೊರೈ-ಭಗವಾನ್ ಹೆಸರು ಕೇಳಿಲ್ಲದ ಅವರ ಸಿನಿಮಾ ನೋಡಿರದ ಕನ್ನಡ ಸಿನಿಮಾ ಪ್ರೇಮಿ ಇರಲಿಕ್ಕಿಲ್ಲ. ದೊರೈ ಅವರು ಕಾಲವಾಗಿ ಬಹಳ ಸಮಯವಾಗಿದೆ. ಭಗವಾನ್ ಅವರು ಈ ವರ್ಷ ಫೆಬ್ರವರಿ 20ರಂದು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಕನ್ನಡ ಚಿತ್ರರಂಗದ ಹಲವು ಗಣ್ಯರು, ಭಗವಾನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು.
ಸಿವಿ ಶಿವಶಂಕರ್
ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಲ್ಲಿ ಒಬ್ಬರಾಗಿದ್ದ ಸಿವಿ ಶಿವಶಂಕರ್ ಅವರು ಜೂನ್ 27ರಂದು ನಿಧನರಾದರು. ರಂಗಭೂಮಿ ಬಳಿಕ ಸಿನಿಮಾಗಳಲ್ಲಿ ಅವರ ಸೇವೆ ಅಪಾರವಾದುದು. ‘ಸಿರಿವಂತನಾದರೂ ಕನ್ನಡ ನಾಡಲ್ಲೆ’, ‘ಕನ್ನಡದಾ ರವಿ ಮೂಡಿ ಬಂದಾ’ ಇವರ ರಚನೆಯೇ. ‘ಮನೆ ಕಟ್ಟಿ ನೋಡು’, ‘ಕನ್ನಡ ಕುವರ’, ‘ನಮ್ಮ ಊರಿನ ರಸಿಕರು’ ಸಿನಿಮಾಗಳನ್ನು ನಿರ್ದೇಶನ ಮಾಡುವ ಜೊತೆಗೆ, ‘ಸ್ಕೂಲ್ ಮಾಸ್ಟರ್’, ‘ಶ್ರೀಕೃಷ್ಣ ಗಾರುಡಿ’, ‘ಭಕ್ತ ಕನಕದಾಸ’, ‘ಸ್ಕೂಲ್ ಮಾಸ್ಟರ್’ ಇನ್ನೂ ಕೆಲ ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದರು.
ಟಪೋರಿ ಸತ್ಯ
ಕನ್ನಡದ ಕೆಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ, ಸಿನಿಮಾ ನಿರ್ದೇಶಕನಾಗಿಯೂ ಹೆಸರು ಮಾಡಿದ್ದ ಟಪೋರಿ ಸತ್ಯ ಏಪ್ರಿಲ್ ತಿಂಗಳಿನಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು. ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು.
ವಾಣಿ ಜಯರಾಂ-ಶರತ್ ಕುಮಾರ್
ಕನ್ನಡಿಗರನ್ನು ಬಹುವಾಗಿ ಕಾಡಿದ ಇತರೆ ಭಾಷೆಯ ಸೆಲೆಬ್ರಿಟಿಗಳ ಸಾವಿನಲ್ಲಿ ಪ್ರಮುಖವಾದುದು ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ ಹಾಗೂ ನಟ ಶರತ್ ಕುಮಾರ್. ವಾಣಿ ಜಯರಾಂ ಅವರು ಕನ್ನಡದ ಅನೇಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಶರತ್ ಕುಮಾರ್, ‘ಅಮೃತವರ್ಷಿಣಿ’ ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.