ಬೆಂಗಳೂರು: ಕನ್ನಡಪರ ಸಂಘಟನೆಗಳು ಹೋಟೆಲ್, ಮಳಿಗೆಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಇಂಗ್ಲಿಷ್ ನಾಮಫಲಕಗಳನ್ನು ಒಡೆದು ಹಾಕುವುದು, ಮಸಿ ಬಳಿಯುವುದನ್ನು ಮಾಡಬಾರದು. ಯಾರೂ ಕೂಡ ಕಾನೂನು ಕ್ರಮ ಕೈಗೊಳ್ಳಬಾರದು. ಇದೆಲ್ಲ ನಾಳೆ ವೈರಲ್ ಆಗಿ ವಿದೇಶಗಳಿಗೆ ಹೋದರೆ ಇಲ್ಲಿ ಇಂಡಸ್ಟ್ರಿಗಳಲ್ಲಿ ಬಂಡವಾಳ ಹೂಡಿಕೆಗೆ ಯಾರೂ ಬರುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು,ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಮಾಡಬೇಕೆಂಬ ನಿಯಮ ಇದ್ದರೂ ಪಾಲಿಸದವರ ವಿರುದ್ಧ ಕರವೇ ಸೇರಿದಂತೆ ಕನ್ನಡಪರ ಕಾರ್ಯಕರ್ತರು ಕಾನೂನು ಕೈಗೆತ್ತಿಗೊಂಡಿದ್ದಾರೆ. ಯಾರೂ ಕೂಡ ಕಾನೂನು ಕ್ರಮ ಕೈಗೊಳ್ಳಬಾರದು. ಇದರಿಂದ ನಮ್ಮ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ನಾಳೆ ಬಂಡವಾಳ ಹೂಡುವವರು ಬಾರದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕನ್ನಡ ನಾಡಲ್ಲಿ ಇದ್ದೇವೆ, ಹೀಗಾಗಿ ಬೋರ್ಡ್ ಹಾಕಬೇಕು ಅಂತ ಅಭಿಮಾನದಿಂದ ಹಾಕಬೇಕು. ಇಂಡಸ್ಟ್ರಿ ವಿಚಾರದಲ್ಲಿ ಬಹಳ ಪೈಪೋಟಿ ಇದೆ. ಇಂಥ ಸಂದರ್ಭದಲ್ಲಿ ಯಾರಿಗೂ ಯಾವ ರಾಜ್ಯ, ಯಾವ ದೇಶವೂ ಅನಿವಾರ್ಯ ಇಲ್ಲ. ಇದನ್ನು ಕನ್ನಡಪರ ಸಂಘಟನೆಯವರು ಅರ್ಥ ಮಾಡಿಕೊಳ್ಳಬೇಕು. ನಮ್ಮ ವ್ಯಾಪ್ತಿಯ ಇಂಡಸ್ಟ್ರಿಗೂ ನಾವು ಸಲಹೆ ಕೊಡುತ್ತೇವೆ. ಕನ್ನಡ ನಾಮಫಲಕ ಹಾಕುವಂತೆ ಹೇಳುತ್ತೇವೆ. ಆದರೆ, ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳುವುದು ಬೇಡ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.