ಬೆಂಗಳೂರು : ಎಲ್ರೀ.. ನಾವು ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ಬಗ್ಗೆ ಯೋಚಿಸಿಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯಲು ಸೂಚಿಸಿದ್ದೇನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದರು.
ನಾವು ಈ ಬಗ್ಗೆ ಯೋಚನೆಯೇ ಮಾಡಿಲ್ಲ. ನೀವೇ ಅದನ್ನು ದೊಡ್ಡದು ಮಾಡುತ್ತಿದ್ದೀರಾ.. ಹಿಜಾಬ್ ನಿಷೇಧ ವಾಪಸ್ ವಿಚಾರ ಚರ್ಚೆಗೆ ಬರ್ತಾ ಇದೆ ಅಂತ ಸಿಎಂ ಹೇಳಿದ್ದಾರೆ ಅಷ್ಟೇ.. ಅಂತ ಯಾವ ವಿಚಾರವೂ ಸರ್ಕಾರದ ಮುಂದೆ ಇಲ್ಲ ಎಂದು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದರು.
ಹೈಕಮಾಂಡ್ ನಾಯಕರಿಗೆ ಪಟ್ಟಿ ತಲುಪಿದೆ
ನಿಗಮ, ಮಂಡಳಿ ನಾಮನಿರ್ದೇಶನಕ್ಕೆ ಹೈಕಮಾಂಡ್ಗೆ ಪಟ್ಟಿ ನೀಡಲಾಗಿದೆ. ನಮ್ಮ ಕಾರ್ಯಕರ್ತರಿಗೂ ಪ್ರಾಧಿಕಾರಗಳಲ್ಲಿ ಅವಕಾಶ ಕೊಡಬೇಕು. ಕಾರ್ಯಕರ್ತರನ್ನು ಯಾವ ರೀತಿ ನೇಮಕ ಮಾಡಬೇಕು, ನಾಲ್ಕು ನಾಲ್ಕು ಜನರನ್ನ ಮೆಂಬರ್ ಮಾಡಬೇಕು. ಪಕ್ಷದ ಪರವಾಗಿ ಯಾರಿಗೆ ಕೊಡಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಯಾವುದೇ ಕ್ಷಣದಲ್ಲಿ ಆದೇಶ ಹೊರಬೀಳಬಹುದು
ಎಲ್ಲ ಮಂತ್ರಿಗಳಿಗೂ ಕೂಡ ಜವಾಬ್ದಾರಿ ವಹಿಸಿದ್ದೇವೆ. ಎಲ್ಲಾ ಸಚಿವರನ್ನು ಕರೆದು ಅಭಿಪ್ರಾಯವನ್ನು ಕೇಳ್ತಿದ್ದೇವೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಾನು, ಸಿಎಂ ಇಬ್ಬರು ಸೇರಿ ತೀರ್ಮಾನ ಮಾಡುತ್ತೇವೆ. ಯಾವುದೇ ಕ್ಷಣದಲ್ಲಿ ನೇಮಕಾತಿ ಆದೇಶ ಹೊರಬೀಳಬಹುದು. ಕಾರ್ಯಕರ್ತರ ಪಟ್ಟಿಯನ್ನು ಕೂಡ ಕೊಡಬೇಕಿದೆ. 40 ಕಾರ್ಯಕರ್ತರಿಗೆ ಕೊಡಬೇಕು ಅಂತ ಇದೆ. ಈ ಬಗ್ಗೆ ಚರ್ಚೆ ನಡೆದಿದೆ, ನನಗೆ ಎಲ್ಲ ಸಚಿವರು ಪಟ್ಟಿ ಕೊಡ್ತಾರೆ. ನಂತರ ತೀರ್ಮಾನ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.