ಹುಬ್ಬಳ್ಳಿ : ಇಲ್ಲದ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುತ್ತೇನೆ ಅಂತಾರೆ. ಇದು ಸಿದ್ದರಾಮಯ್ಯನವರ ಮುಟ್ಟಾಳತನ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಿಜಾಬ್ ನಿಷೇಧ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಮೂರ್ಖರಂತೆ ಮಾತನಾಡುತ್ತಿದ್ದಾರೆ. ಅವರ ವೈಫಲ್ಯ ಮುಚ್ಚಿಕೊಳ್ಳೋಕೆ ಹೀಗೆ ಮಾಡ್ತಾ ಇದ್ದಾರೆ ಎಂದು ಕುಟುಕಿದರು.
ನೀವು ಗೊತ್ತಿದ್ದೂ ಮಾಡ್ತಾ ಇದ್ರೆ ಸಮಾಜಕ್ಕೆ ಮಾಡುವ ಅನ್ಯಾಯ. ಗೊತ್ತಿಲ್ಲದೇ ಹೇಳಿದ್ರೆ ನೀವು ಸಿಎಂ ಖುರ್ಚಿಗೆ ಅನರ್ಹರು. ಮಿಸ್ಟರ್ ಸಿದ್ದರಾಮಯ್ಯ ಎಲ್ಲಿ ಹಿಜಾಬ್ ಬ್ಯಾನ್ ಇದೆ? ಹಿಜಾಬ್ ಬ್ಯಾನ್ ವಿಷಯದಲ್ಲಿ ಮೂರ್ಖರಂತೆ ಮಾತನಾಡ್ತಾ ಇದ್ದೀರಿ. ರಾಹುಲ್ ಗಾಂಧಿ ಅವರ ಸಹವಾಸ ದೋಷ ಕಾರಣ ಇರಬಹುದು. ತುಷ್ಟೀಕರಣದಲ್ಲಿ ಮತ ಪಡೆಯುವ ಹುನ್ನಾರ ಇದು ಎಂದು ಛೇಡಿಸಿದರು.
ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಲ್ಲ
ನಾನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಇಲ್ಲಿನ ಜನ ಹಿಂದೆ ಆಶೀರ್ವಾದ ಮಾಡಿದ್ದಾರೆ. ಮುಂದೆಯೂ ಜನ ಆಶೀರ್ವಾದ ಮಾಡ್ತಾರೆ. ನಾನು ಪದೇ ಪದೆ ಹೇಳಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮಂತ್ರಿ ಅಭ್ಯರ್ಥಿಯಾಗಲು ಇನ್ನು ಒಪ್ಪಿಲ್ಲ. ರಾಹುಲ್ ಗಾಂಧಿ ಅವರೇ ಒಪ್ಪಿಲ್ಲ ಎಂದು ಪ್ರಲ್ಹಾದ್ ಜೋಶಿ ಚಾಟಿ ಬೀಸಿದರು.