ದಾವಣಗೆರೆ : ನೀವು ಹಿಜಾಬ್ ಆದೇಶ ವಾಪಸ್ ಪಡೆದರೆ, ನಮ್ಮ ಹುಡುಗ ಹುಡುಗಿಯರು ಕೇಸರಿ ಶಾಲು, ಕೇಸರಿ ಟೋಪಿ ಧರಿಸಿಕೊಂಡು ಬರುತ್ತಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಜಾಬ್ ವಾಪಸ್ ಪಡೆದರೆ ರಾಜ್ಯದಲ್ಲಿ ಕೋಮು ಗಲಭೆಗಳು ಆಗುತ್ತವೆ. ಆ ರೀತಿ ಕೋಮು ಗಲಭೆಗಳು ಆದರೆ ಅದಕ್ಕೆ ರಾಜ್ಯ ಸರ್ಕಾರ ನೇರ ಕಾರಣ ಎಂದು ಕುಟುಕಿದರು.
ಕರ್ನಾಟಕದಲ್ಲಿ ತುಘಲಕ್, ಟಿಪ್ಪು ಸರ್ಕಾರ ಇದೆ. ಅನುಭವಿ ಸಿದ್ದರಾಮಯ್ಯ ಅವರು ಹಿಜಾಬ್ ಸರ್ಕಾರಿ ಆದೇಶ ಹಿಂಪಡೆಯುತ್ತೇನೆ ಎಂದಿದ್ದಾರೆ. ಒಂದು ವರ್ಗವನ್ನು ಓಲೈಸಲು ಈ ತರ ಮಾಡುತಿದ್ದಾರೆ. ಬಟ್ಟೆ, ಊಟ ನಿಮ್ಮ ಹಕ್ಕು. ಇಲ್ಲಿ ಶಾಲಾ, ಕಾಲೇಜು ಸಮವಸ್ತ್ರ ಇರಬೇಕು. ಹಿಜಾಬ್ ಧರಿಸಲು ಅವರಿಗೆ ಅವಕಾಶ ಕೊಟ್ಟರೆ ನಮಗೂ ಕೇಸರಿ ಶಾಲು ಧರಿಸಲು ಅವಕಾಶ ಕೊಡಿ. ನಮ್ಮ ಹುಡುಗರಿಗೆ ಕೇಸರಿ ಶಾಲು ಧರಿಸಿ ಬರಲು ನಾನೇ ಹೇಳ್ತಿನಿ ಎಂದು ಗುಡುಗಿದರು.
ಬರಗಾಲವಿದೆ, ಜನ ದಂಗೆ ಏಳ್ತಾರೆ
ನಮ್ಮ ಸರ್ಕಾರ ಶಾಲಾ ಆವರಣದಲ್ಲಿ ಹಿಜಾಬ್ ತಿರಸ್ಕರಿತ್ತು. ಇದನ್ನ ಪ್ರಶ್ನಿಸಿ ಕೋರ್ಟ್ಗೆ ಹೋದರು. ಭೀಕರ ಬರಗಾಲವಿದೆ, ಜನ ದಂಗೆ ಏಳ್ತಾರೆ ಅಂತ ವಿಷಯಾಂತರ ಮಾಡಲು ಹಿಜಾಬ್ ವಿಚಾರ ಎಳೆದು ತಂದಿದ್ದಾರೆ. ನೀವು ಒಂದು ವರ್ಗದ ಮುಖ್ಯಮಂತ್ರಿ ಅಲ್ಲ. ನೀವು ಹಿಜಾಬ್ ಆದೇಶ ವಾಪಸ್ ಪಡೆದರೆ ನಮ್ಮ ಹುಡುಗ ಹುಡುಗಿಯರು ಕೇಸರಿ ಶಾಲು, ಕೇಸರಿ ಟೋಫಿ ಧರಿಸಿಕೊಂಡು ಬರ್ತಾರೆ. ಇದು ಸಂಘರ್ಷಕ್ಕೆ ಕಾರಣ ಆದರೆ ಅದಕ್ಕೆ ಮುಖ್ಯಮಂತ್ರಿ ಕಾರಣ ಆಗ್ತಾರೆ ಎಂದು ಹೇಳಿದರು.
ಜಮೀರ್ ಪಕ್ಕದಲ್ಲಿ ಇದ್ರೆ ಈ ರೀತಿ ಆಗುತ್ತೆ
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡ್ತಿವಿ ಅಂತ ಹೇಳ್ತಾರೆ. ಯಾಕೆ ಮೈಸೂರು ಮಹಾರಾಜರು ನಿಮ್ಮ ಕಣ್ಣಿಗೆ ಕಾಣ್ತಾ ಇಲ್ವಾ? ಮೈಸೂರು ರಾಜರು ಕನ್ನಂಬಾಡಿ ಕಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಪ್ರಕಾರ ಜಮೀರ್ ಅಹ್ಮದ್ನಂತ ಮತಾಂಧನನ್ನ ಎಡಕ್ಕೆ ಬಲಕ್ಕೆ ಇಟ್ಟುಕೊಂಡರೆ ಈ ರೀತಿ ಆಗುತ್ತೆ ಎಂದು ರೇಣುಕಾಚಾರ್ಯ ಕಿಡಿಕಾರಿದರು.