Saturday, November 2, 2024

ಚಾಪೆ ಮೇಲೆ ಕುಳಿತು ಪಾಠ ಕೇಳುವ ಮಕ್ಕಳು, ಬೆಡ್ ಇಲ್ಲದೆ ನೆಲದ ಮೇಲೆಯೇ ನಿದ್ರೆ

ಹಾವೇರಿ : ಭವ್ಯವಾದ ಕಟ್ಟಡ ಕಟ್ಟಲಾಗಿದೆ, 20 ಕೋಟಿ ವೆಚ್ಚ ಮಾಡಿದ್ದಾರೆ. ಆದ್ರೆ, ಶಾಲಾ ಮಕ್ಕಳು ಮಾತ್ರ ಚಾಪೆ ಮೇಲೆ ಕುಳಿತು ಪಾಠ ಕೇಳ್ತಾರೆ. ಬೆಡ್ ಇಲ್ಲದೆ ನೆಲದ ಮೇಲೆ ಮಲಗಬೇಕಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಸಾವಿರಾರು ಕೋಟಿ ವೆಚ್ಚ ಮಾಡ್ತಿದೆ. ಆದ್ರೆ, ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಲು ಚೌಕಾಸಿ ಮಾಡ್ತಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಅಕ್ಕೂರಿನಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯನ್ನ 20 ಕೋಟಿ ವೆಚ್ಚ ಮಾಡಿ ಕಟ್ಟಲಾಗಿದೆ. 20 ಕೋಟಿಯಲ್ಲಿ ಕಟ್ಟಡ ಕಟ್ಟಿ, ಮಕ್ಕಳಿಗೆ ಡೆಸ್ಕ್ ನೀಡುವುದನ್ನ ಸರ್ಕಾರ ಮೆರೆತಿದೆ. ನೆಲದ ಮೇಲೆ ಚಾಪೆ ಹಾಸಿಕೊಂಡು ಮಕ್ಕಳು ಪಾಠ ಕೇಳುತ್ತಿದ್ದಾರೆ. ಡೆಸ್ಕ್ ನಂತಹ ಮೂಲಭೂತ ಸೌಲಭ್ಯ ನೀಡದ ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಚಳಿಯಲ್ಲಿ ನೆಲದ ಮೇಲೆಯೇ ಮಲಗುವ ಮಕ್ಕಳು

ಒಂದು ಕಡೆ ಶಾಲಾ ಕೊಠಡಿಗಳಲ್ಲಿ ಮಕ್ಕಳು ದಿನವಿಡೀ ಚಾಪೆ ಮೇಲೆ ಕುಳಿತು ಪಾಠ ಕೇಳ್ತಿದ್ರೆ, ಇತ್ತ ವಸತಿ ನಿಲಯದಲ್ಲಿ ಕಾಟ್ ಹಾಗೂ ಬೆಡ್ ನೀಡಿಲ್ಲ. ಬೆಡ್ ನೀಡದ ಪರಿಣಾಮ ಕೊರೆಯುವ ಚಳಿಯಲ್ಲಿ ನೆಲದ ಮೇಲೆ ಮಕ್ಕಳು ಮಲಗುವಂತಾಗಿದೆ. ಅಷ್ಟೆ ಅಲ್ಲದೆ, ಡೈನಿಂಗ್ ಹಾಲ್ ನಲ್ಲಿ ಡೈನಿಂಗ್ ಟೇಬಲ್ ಕೊಡುವುದನ್ನು ಸರ್ಕಾರ ಮರೆತು ಬಿಟ್ಟಿದೆ.

ಮೂಲಭೂತ ಸೌಲಭ್ಯ ನೀಡುವುದನ್ನ ಮರೆತ ಸರ್ಕಾರ

ಅಲ್ಪ ಸಂಖ್ಯಾತರ ಇಲಾಖೆಗೆ ಸೇರಿದ ಈ ವಸತಿ ಶಾಲೆಯಲ್ಲಿ 560 ಮಕ್ಕಳು ಕಲಿಯುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಿಲ್ಲದಿರುವುದನ್ನ ಅಧಿಕಾರಿಗಳೆ ಒಪ್ಪಿಕೊಂಡಿದ್ದು, ತಮ್ಮ ಅಸಹಾಯಕತೆಯನ್ನ ತೋಡಿಕೊಂಡಿದ್ದಾರೆ. ಕೋಟಿ ಕೋಟಿ ವೆಚ್ಚದಲ್ಲಿ ಬಿಲ್ಡಿಂಗ್ ಕಟ್ಟಿದ ಸರ್ಕಾರ, ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಲಭ್ಯ ನೀಡುವುದನ್ನ ಮರೆತಂತಿದೆ.

ಇನ್ನಾದರೂ ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡುವ ಬದಲು ಮಕ್ಕಳ ಭವಿಷ್ಯ ರೂಪಿಸಲು ಮೂಲಭೂತ ಸೌಲಭ್ಯ ನೀಡಬೇಕಾಗಿದೆ.

RELATED ARTICLES

Related Articles

TRENDING ARTICLES