ನವದೆಹಲಿ : ಭಾರತದಲ್ಲಿ ಯುವಕರು ಹೆಚ್ಚಾಗಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಕಾಲ ಕಳೆಯುತ್ತಿರುವುದೇ ನಿರುದ್ಯೋಗ ಸಮಸ್ಯೆಗೆ ಕಾರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಬ್ಬರು ಯುವಕರು ಸಂಸತ್ ಭವನದಲ್ಲಿ ಭದ್ರತಾಲೋಪ ಎಸಗಿರುವುದು ನಿಜವಾದರೂ ಅವರು ಹಾಗೆ ಯಾಕೆ ವರ್ತಿಸಿದರು ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ ಎಂದು ತಿಳಿಸಿದ್ದಾರೆ.
ಸಂಸತ್ತಿನೊಳಗೆ ಸ್ಮೋಕ್ ಬಾಂಬ್ ಸಿಡಿಸಿದ ಆ ಯುವಕರು ಮನಸ್ಸು ಮಾಡಿದ್ದರೆ ಬೇರೆ ಏನನ್ನಾದರೂ ತಂದು ಸಿಡಿಸಬಹುದಿತ್ತು. ಆದರೆ, ಅವರು ಸರ್ಕಾರದ ವಿರುದ್ದ ತಮ್ಮ ಪ್ರತಿಭಟನೆ ವ್ಯಕ್ತಪಡಿಸುವ ಉದ್ದೇಶ ಮಾತ್ರ ಹೊಂದಿದ್ದರು. ಅವರು ಹಾಗೆ ವರ್ತಿಸುವುದಕ್ಕೆ ನೇರ ಕಾರಣ ನಿರುದ್ಯೋಗ ಎಂದು ಹೇಳಿದ್ದಾರೆ.
7 ಗಂಟೆ ಫೇಸ್‌ಬುಕ್, ಇನ್ಸ್ಟಾದಲ್ಲಿ ಮುಳುಗಿರ್ತಾರೆ
ನಮ್ಮ ದೇಶದ ಬಹುಪಾಲು ಯುವಕರು ದಿನಕ್ಕೆ ಏಳು ಅಥವಾ ಏಳೂವರೆ ಗಂಟೆ, ಫೇಸ್‌ಬುಕ್ ಮತ್ತು ಇನ್‌ಸ್ಟಾ ಗ್ರಾಮ್ ನಲ್ಲಿ ಮುಳುಗಿ ಹೋಗಿರುತ್ತಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬಹುದಿನಗಳಿಂದ ಕಾಡುತ್ತಿತ್ತು. ಅದಕ್ಕೆ ಈಗ ಉತ್ತರಸಿಕ್ಕಿದೆ. ನಮ್ಮ ಯುವಕರು ನಿರುದ್ಯೋಗಿಳಗಳಾಗರುವುದರಿಂದಲೇ ಫೇಸ್‌ಬುಕ್ ಇನ್ ಸ್ಟಾಗ್ರಾಮ್ ಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.