ಬೆಂಗಳೂರು : ಸೈಫರ್ ಪ್ರಕರಣದಲ್ಲಿ ಬಂಧಿತರಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಜಾಮೀನು ಮಂಜೂರಾಗಿದೆ.
ಈ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ಪಾಕಿಸ್ತಾನ ಸುಪ್ರಿಂಕೋರ್ಟ್, ಇಮ್ರಾನ್ ಖಾನ್ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಗೆ ಜಾಮೀನು ಮಂಜೂರು ಮಾಡಿದೆ.
2022ರಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಮೇರಿಕಾದೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದ ಮಹತ್ವದ ದಾಖಲೆಗಳನ್ನು ನಾಶ ಮಾಡಿದ ಆರೋಪ ಹೊರಿಸಲಾಗಿದೆ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಮತ್ತು ಶಾ ಮೆಹಮೂದ್ ಖುರೇಷಿ ಅವರನ್ನು ಎರಡೆರಡು ಬಾರಿ ಬಂಧಿಸಿ, ರಾವೆಲ್ಫಿಂಡಿಯಾ ಅದಿಲಾ ಜೈಲಿನಲ್ಲಿ ಇರಿಸಲಾಗಿತ್ತು.
ಇಂದು ಇಮ್ರಾನ್ ಖಾನ್ ಮತ್ತು ಶಾ ಮೆಹಮೂದ್ ಖುರೇಷಿಯವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪಾಕಿಸ್ತಾನ್ ಸುಪ್ರಿಂಕೋರ್ಟ್ನ ತ್ರಿಸದಸ್ಯ ಪೀಠವು ತಲಾ 10 ಲಕ್ಷ ರೂಪಾಯಿಗಳ ಶ್ಯೂರಿಟಿ ಬಾಂಡ್ ನೀಡುವ ಶರತ್ತಿನೊಂದಿಗೆ ಇಬ್ಬರಿಗೂ ಜಾಮೀನು ಮಂಜೂರು ಮಾಡಿತು.
3 ವರ್ಷ ಜೈಲು, 1 ಲಕ್ಷ ದಂಡ
ಇಮ್ರಾನ್ ಖಾನ್ ಗೆ ಜಾಮೀನು ಮಂಜೂರಾಗಿದ್ದರೂ ಸಹ, ತೋಷ್ ಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ರನ್ನು ದೋಷಿ ಎಂದು ಪರಿಗಣಿಸಿರುವುದರಿಂದ ಅವರು ಜೈಲಿನಿಂದ ಬಿಡುಗಡೆಯಾಗುವಂತಿಲ್ಲ. ತೋಷ್ ಖಾನಾ ಪ್ರಕಣದಲ್ಲಿ ಜಿಲ್ಲಾ ನ್ಯಾಯಾಲಯವು ಇಮ್ರಾನ್ ಖಾನ್ ಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.