ನವದೆಹಲಿ : ದೆಹಲಿ ಪ್ರವಾಸದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಾಯಕರು ಬಿಜೆಪಿ ಹೈ ಕಮಾಂಡ್ ಮಟ್ಟದ ನಾಯಕರನ್ನು ಭೇಟಿಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಿ.ವೈ. ವಿಜಯೇಂದ್ರ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ತಮ್ಮ ಮೊದಲ ಭೇಟಿಯಲ್ಲಿಯೇ ಪ್ರಧಾನಿ ಮೋದಿಯ ಮೆಚ್ವುಗೆಗೆ ಪಾತ್ರರಾಗಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಳಿಕ ಮೊದಲ ಬಾರಿಗೆ ಬಿಜೆಪಿ ಹೈ ಕಮಾಂಡ್ ಮಟ್ಟದ ನಾಯಕರನ್ನು ಕುಮಾರಸ್ವಾಮಿ ಭೇಟಿಯಾಗಿದ್ದಾರೆ. ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಸದ್ಯದ ಕರ್ನಾಟಕ ರಾಜಕೀಯ ಸ್ಥಿತಿ ಗತಿಗಳ ಬಗ್ಗೆ ಚರ್ಚಿಸಿದ್ದಾರೆ. ನಿನ್ನೆ ಪ್ರಧಾನಿ ಮೋದಿಯನ್ನು ಜೆಡಿಎಸ್ ವರಿಷ್ಟ ದೇವೇಗೌಡ ನೇತೃತ್ವದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಿಜೆಪಿ ರಾಜ್ಯಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊಲದ ಬಾರಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ವಿಜಯೇಂದ್ರ ಭೇಟಿಯಾಗಿದ್ದಾರೆ. ಭೇಟಿಯಲ್ಲಿ ಲೋಕಸಭಾ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಸಂಘಟನೆ ಸೇರಿದಂತೆ ಹಲವಾರು ಮಹತ್ವದ ಸಂಗತಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ಭೇಟಿಯ ಕುರಿತು ಅಪರಿಮಿತ ಸಂತಸವನ್ನು ಅನೌಪಚಾರಿಕವಾಗಿ ಮಾತುಕತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಜಯೇಂದ್ರ ಕಾರ್ಯವೈಖರಿಗೆ ಮೋದಿ ಫಿದಾ
ಪ್ರಧಾನಿ ಮೋದಿ ಭೇಟಿಯಿಂದ ಉತ್ಸಾಹ ಹೆಚ್ಚಿಸಿಕೊಂಡಿರುವ ವಿಜಯೇಂದ್ರ, ಪಕ್ಷ ಸಂಘಟನೆ ಕಡೆಗೆ ಹೆಚ್ಚಿನ ಒಲವು ತೋರ್ತಿದ್ದಾರೆ. ದೆಹಲಿಯಲ್ಲಿದ್ರು ಪಕ್ಷದ ಚಟುವಟಿಕೆಗಳ ಬಗ್ಗೆ ನಿಗಾ ಇಟ್ಟಿದ್ದಾರೆ. ಹಾಲಿ ನಡೆಯುತ್ತಿರುವ ವಿಕ್ಸಿತ್ ಭಾರತ್ ಅಭಿಯಾನದ ಸಂಪೂರ್ಣ ಮಾಹಿತಿ ಜೊತೆಗೆ ವರದಿಗಳನ್ನು ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯಲ್ಲಿ ಮೆಚ್ಚುಗೆ ಜೊತೆಗೆ ರಾಜಕೀಯ ಸಲಹೆಗಳನ್ನು ಪಡೆದಿದ್ದಾರೆ. ನಿಮ್ಮ ಮಿತಿಯ ಮಾತುಗಳನ್ನಾಡುವ ಗುಣ ತುಂಬಾ ಇಷ್ಟ ಆಗಿದೆ. ಬೂತ್ ಮಟ್ಟದ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಎಲ್ಲರಿಗೂ ಮಾದರಿಯಾಗಿದ್ದೀರಿ, ಪಕ್ಷ ಸಂಘಟನೆ ಮಾಡುವ ಚತುರತೆ ನಿಮ್ಮಲ್ಲಿದೆ, ಹಲವು ಬಾರಿ ನಿಮ್ಮ ಮಾತುಗಳನ್ನು ನಾನು ಗಮನಿಸಿದ್ದೇನೆ ಅಂತ ಮೋದಿಯವರ ಮೊದಲ ಭೇಟಿಯಲ್ಲಿ ವಿಜಯೇಂದ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರಗೆ ಅಮಿತ್ ಶಾ ಕೊಟ್ಟ ಸೂಚನೆಗಳೇನು?
ಪ್ರಧಾನಿ ಭೇಟಿ ಬಳಿಕ ಅಮಿತ್ ಶಾ ಅವರನ್ನು ವಿಜಯೇಂದ್ರ ಭೇಟಿಯಾಗಿದರು. ಕೋರ್ ಕಮಿಟಿಯಲ್ಲಿ ಕೆಲವು ಬದಲಾವಣೆಯನ್ನು ಮಾಡುವಂತೆ ಸೂಚನೆ ನೀಡಿರುವ ಅಮಿತ್ ಶಾ, ಕೆಲವು ರಾಜ್ಯ ನಾಯಕರ ಅಸಮಾಧಾನಗಳನ್ನು ಗಮನಿಸಿದ್ದು, ಮುಂದಿನ ದಿನಗಳಲ್ಲಿ ಅದನ್ನೆಲ್ಲ ಸರಿಪಡಿಸುವ ಕೆಲಸ ಮಾಡ್ತೇವೆ ಎಂದು ಅಭಯ ನೀಡಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಅಮಿತ್ ಶಾ ಜತೆಗೆ ವಿಜಯೇಂದ್ರ ಚರ್ಚೆ ಮಾಡಿದ್ದಾರೆ. ಈ ವೇಳೆ ಅಮಿತ್ ಶಾ ಅವರು ಕೆಲವು ಸೂಚನೆಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕು. ಈ ದೃಷ್ಟಿಯಿಂದ ಪದಾಧಿಕಾರಿಗಳ ನೇಮಕವನ್ನು ಆದಷ್ಟು ಬೇಗ ಮಾಡಬೇಕು. ಬೂತ್ ಮಟ್ಟದಿಂದ ಹಿಡಿದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.