ಕಲಬುರಗಿ : ಮೂರಲ್ಲ ಬಿಜೆಪಿ ಅವರ ಮನೆ ನೂರು ಬಾಗಿಲಾಗಿದೆ ಎಂದು ಬಿಜೆಪಿ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಗೆಲ್ಲಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ಕಲಬುರಗಿಯಲ್ಲಿ ಮಾತನಾಡಿದ ಅವರು, ಇವರ (ಬಿಜೆಪಿ ಹಾಗೂ ಜೆಡಿಎಸ್) ಎರಡೂ ಮನೆಗೂ ಬೆಂಕಿ ಹತ್ತಿದೆ ಎಂದು ಕುಟುಕಿದ್ದಾರೆ.
ಬೆಳಗಾವಿಯಲ್ಲಿ ನೋಡಿದ್ದೇವೆ ಇವರದ್ದು ಮನೆ ಒಂದು ಮೂರು ಬಾಗಿಲಾಗಿದೆ. ಒಂದು ಬಾಗಿಲು ಶಾಸಕ ಯತ್ನಾಳ್ ಕಾಯ್ತಾ ಇದ್ದಾರೆ. ಇನ್ನೊಂದು ಬಾಗಿಲು ವಿಪಕ್ಷ ನಾಯಕ ಆರ್. ಅಶೋಕ್ ಕಾಯ್ತಾ ಇದ್ದಾರೆ. ಮೂರನೇ ಬಾಗಿಲು ಬಿ.ವೈ. ವಿಜಯೇಂದ್ರ ಕಾಯ್ತಾ ಇದ್ದಾರೆ. ಎಲ್ಲಿದೆ ಇವರಲ್ಲಿ ಸಮನ್ವಯತೆ? ಎಂದು ಹರಿಹಾಯ್ದಿದ್ದಾರೆ.
ಅಸಲಿ ವಿಪಕ್ಷದ ನಾಯಕ ಯಾರು?
ರಾಜ್ಯದಲ್ಲಿ ಭೀಕರ ಬರವಿದೆ. ಬರಗಾಲದ ಬಗ್ಗೆ ಚರ್ಚೆ ಮಾಡಿ ಎಂದರೆ ಅವರು ತೆಲಂಗಾಣ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಾರೆ. ನಾನು ವಿರೋಧ ಪಕ್ಷ ನಾಯಕ ಅಂತ ಒಬ್ಬರು ಹೇಳ್ತಾರೆ. ಅಸಲಿ ವಿರೋಧ ಪಕ್ಷದ ನಾಯಕ ನಾನು ಅಂತ ಇನ್ನೊಬ್ಬರು ಹೇಳ್ತಾರೆ. ಅವರಲ್ಲೇ ಅಸಮಾಧಾನ ಬುಗಿಲೆದ್ದಿದೆ ಎಂದು ಪ್ರಿಯಾಂಕ್ ಖರ್ಗೆ ಚಾಟಿ ಬೀಸಿದ್ದಾರೆ.