ಚಿಕ್ಕಬಳ್ಳಾಪುರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ (ಕೋಚಿಮುಲ್) ನಡೆಯುತ್ತಿರುವ ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದಿದ್ದು, ಈ ಕುರಿತು ಮಾಜಿ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾಂಗ್ರೆಸ್ ಸರ್ಕಾರ ಇದರ ವಿರುದ್ಧ ತನಿಖೆಗೆ ಆದೇಶಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಡಾ.ಕೆ.ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ (ಕೋಚಿಮುಲ್) ನಡೆಯುತ್ತಿರುವ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ದಕ್ಕಿದ್ದ ಪ್ರತ್ಯೇಕ ಹಾಲು ಒಕ್ಕೂಟವನ್ನು ರದ್ದು ಮಾಡಿದ ಕಾಣದ ಕೈಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಬಣ್ಣ ಬಯಲಾಗಿದೆ. ನೇಮಕಾತಿ ಪ್ರಕ್ರಿಯೆ ಮುಗಿಯುವ ಮುನ್ನವೇ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭ್ಯರ್ಥಿಗಳ ಹೆಸರಿನ ಮುಂದೆ ಅವರನ್ನು ಶಿಫಾರಸ್ಸು ಮಾಡಿದ ವ್ಯಕ್ತಿಗಳ ಹೆಸರನ್ನು ಸಹ ನಮೂದಿಸಿರುವುದನ್ನು ಗಮನಿಸಿದರೆ ನೇಮಕಾತಿ ಎಷ್ಟು ಪಾರದರ್ಶಕವಾಗಿ ನಡೆದಿದೆ ಎಂದು ತಿಳಿಯುತ್ತದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ ತಾಲೂಕು ಕಸಾಪ ಸಮ್ಮೇಳನ: ಅಧ್ಯಕ್ಷರಾಗಿ ಡಾ.ಆಂಜಿನಪ್ಪ ಆಯ್ಕೆ
ಈ ಇಡೀ ನೇಮಕಾತಿ ಪ್ರಕ್ರಿಯೆಯೇ ಒಂದು ದೊಡ್ಡ ಹಗರಣವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಪ್ರಾಮಾಣಿಕ ಹಾಗೂ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಈ ನೇಮಕಾತಿಯನ್ನು ಕೂಡಲೇ ರದ್ದುಪಡಿಸಿ, ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ದಕ್ಕಿದ್ದ ಪ್ರತ್ಯೇಕ ಹಾಲು ಒಕ್ಕೂಟವನ್ನು ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ರದ್ದು ಮಾಡಿತು. ಜಿಲ್ಲೆ ರಚನೆಯಾದ 16 ವರ್ಷಗಳ ನಂತರ ಚಿಕ್ಕಬಳ್ಳಾಪುರಕ್ಕೆ ಒಂದು ಪ್ರತ್ಯೇಕ ಹಾಲು ಒಕ್ಕೂಟ ದಕ್ಕಿತೆಂದು ಸಂಭ್ರಮಿಸುವ ಮೊದಲೇ ಕಾಂಗ್ರೆಸ್ ಸರ್ಕಾರ ರೈತರ ಕನಸನ್ನು ನುಚ್ಚು ನೂರು ಮಾಡಿತು.
ರಾಜ್ಯದಲ್ಲಿ ಹಾಲು ಉತ್ಪಾದನೆ ಮಾಡುವ ಪ್ರಮುಖ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಮುಂಚೂಣಿಯಲ್ಲಿದ್ದು ಹೈನುಗಾರಿಕೆಯಿಂದಲೇ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಜಿಲ್ಲೆಯಲ್ಲಿ ಒಟ್ಟು ಸುಮಾರು 1.75 ಲಕ್ಷ ರಾಸುಗಳಿದ್ದು ಜಿಲ್ಲೆಯ ಐದು ತಾಲ್ಲೂಕುಗಳಿಂದ ಪ್ರತಿನಿತ್ಯ ಸುಮಾರು 3.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. 2 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಚಾಮರಾಜನಗರ ಹಾಗೂ 50,000 ಲೀಟರ್ ಹಾಲು ಉತ್ಪಾದಿಸುವ ಬೀದರ್, ಕಲಬುರಗಿ ಜಿಲ್ಲೆಗಳಿಗೆ ಕೂಡ ಪ್ರತ್ಯೇಕ ಹಾಲು ಒಕ್ಕೂಟಗಳಿದ್ದರೂ ಚಿಕ್ಕಬಳ್ಳಾಪುರಕ್ಕೆ ಮಾತ್ರ ಪ್ರತ್ಯೇಕ ಒಕ್ಕೂಟ ನೀಡದೆ ಕಾಂಗ್ರೆಸ್ ಪಕ್ಷ ದಶಕಗಳಿಂದ ಜಿಲ್ಲೆಯ ರೈತರಿಗೆ, ಹೈನುಗಾರಿಕೆ ಉದ್ಯಮಕ್ಕೆ ಅನ್ಯಾಯ ಮಾಡುತ್ತಾ ಬಂದಿತ್ತು.
ಆಡಳಿತಾತ್ಮಕ ದೃಷ್ಟಿಯಿಂದ, ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಲು ಪ್ರತ್ಯೇಕ ಹಾಲು ಒಕ್ಕೂಟ ಅಗತ್ಯವಿದೆ ಎಂದು ಹೋರಾಟ ಮಾಡಿ, ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸದಸ್ಯರನ್ನು ಮನವೊಲಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುವಲ್ಲಿ ಯಶಸ್ವಿಯಾಗಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಒಂದು ವರ್ಷದಿಂದ ನಡೆಯುತ್ತಿದ್ದ ಪ್ರತ್ಯೇಕ ಒಕ್ಕೂಟವನ್ನು ಧಿಡೀರನೆ ನಿಲ್ಲಿಸಿ, ಬಿಜೆಪಿ ಸರ್ಕಾರದ ಆದೇಶವನ್ನು ಏಕಾಏಕಿ ರದ್ದು ಮಾಡಿ ಜಿಲ್ಲೆಯ ರೈತರ ಹಕ್ಕು ಕಸಿದುಕೊಳ್ಳುವ ಪಾಪದ ಕೆಲಸಕ್ಕೆ ಕೈ ಹಾಕಿತು.
ಈ ನೇಮಕಾತಿ ಹಗರಣ ಗಮನಿಸಿದರೆ, ಪ್ರತ್ಯೇಕ ಒಕ್ಕೂಟವನ್ನು ವಿರೋಧಿಸುವ ಕಾಣದ ಕೈಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ದುರುದ್ದೇಶ ಏನೆಂದು ಅರ್ಥವಾಗುತ್ತಿದೆ. ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಅಪಾರದರ್ಶಕವಾಗಿದ್ದು, ಅಕ್ರಮ ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದ್ದರಿಂದ ಈ ನೇಮಕಾತಿಯನ್ನು ಈ ಕೂಡಲೇ ರದ್ದು ಮಾಡಿ ನಿಷ್ಪಕ್ಷಪಾತ ತನಿಖೆಗೆ ಆದೇಶ ಮಾಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಡಾ.ಕೆ. ಸುಧಾಕರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟನ್ನು ಹಂಚಿಕೊಂಡಿದ್ದಾರೆ.