ಮಂಡ್ಯ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿ ಇದ್ದರೂ, ಮಂಡ್ಯದಲ್ಲಿ ಆಕ್ರಮ ಕಸಾಯಿಖಾನೆಗಳು ತಲೆ ಎತ್ತಿವೆ. ಅಕ್ರಮವಾಗಿ ಗೋವುಗಳನ್ನ ಹತ್ಯೆ ಮಾಡಿ, ಶೆಡ್ ವೊಂದರಲ್ಲಿ ಮೂಳೆ ಹಾಗು ಮಾಂಸವನ್ನ ಶೇಖರಣೆ ಮಾಡಲಾಗುತ್ತಿದೆ. ಇದು ಜಿಲ್ಲೆಯ ಜನರ ಆತಂಕಕ್ಕೂ ಕೂಡ ಕಾರಣವಾಗಿದೆ.
ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಹೊರವಲಯದಲ್ಲಿರೋ ಲಿಂಗರಾಜು ಎಂಬುವವರ ಜಮೀನಿನಲ್ಲಿ ನೂರಾರು ಜಾನುವಾರುಗಳ ಮೂಳೆ ಪತ್ತೆಯಾಗಿದೆ. ಗ್ರಾಮದ ಭಜರಂಗದಳದ ಕಾರ್ಯಕರ್ತರು, ದಂಧೆ ನಡೆಯುತ್ತಿದ್ದ ಅಡ್ಡೆಯನ್ನ ಪತ್ತೆ ಮಾಡಿದ್ದಾರೆ.
ಅಂದಹಾಗೆ ವಾರದ ಹಿಂದೆ ಮಂಡ್ಯ ಮೂಲದ ಮುಸ್ಲಿಂ ವ್ಯಾಪಾರಿ ಒಬ್ಬ, ಗುಜರಿ ವಸ್ತುಗಳನ್ನ ಸಂಗ್ರಹ ಮಾಡಲು ಲಿಂಗರಾಜು ಬಳಿ ಜಮೀನು ಬಾಡಿಗೆ ಪಡೆದು, ಶೆಡ್ ನಿರ್ಮಾಣ ಮಾಡಿ ಅಲ್ಲಿ, ಜಾನುವಾರುಗಳ ಹತ್ಯೆ ಹಾಗೂ ಅಕ್ರಮ ಕಸಾಯಿಖಾನೆಗಳಲ್ಲಿ ಕಡಿದ ಜಾನುವಾರುಗಳ ಮೂಳೆಯನ್ನ ತಂದು ಶೇಖರಣೆ ಸಹಾ ಮಾಡಲಾಗಿದೆ. ಇನ್ನು ಮೂಳೆಗಳನ್ನ ಪೌಡರ್ ಮಾಡಲು ಕೂಡ ಬಳಸುತ್ತಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಅಡ್ಡೆ ಮೇಲೆ ಭಜರಂಗದಳ ಕಾರ್ಯಕರ್ತರ ದಾಳಿ
ಕಳೆದ ಒಂದು ವಾರದಿಂದ ಈ ರೀತಿಯ ದಂಧೆ ಕೂಡ ನಡೆಯುತ್ತಿದೆ. ರಾತ್ರಿ ವೇಳೆ ಜಾನುವಾರುಗಳನ್ನ ತಂದು ಹತ್ಯೆ ಮಾಡಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಂತರ ಶೆಡ್ ನಿಂದ ಕೆಟ್ಟ ವಾಸನೆ ಕೂಡ ಬರಲು ಆರಂಭಿಸಿದೆ. ಹೀಗಾಗಿಯೇ ಭಜರಂಗದಳ ಕಾರ್ಯಕರ್ತರು ಅಡ್ಡೆ ಮೇಲೆ ದಾಳಿ ಮಾಡಿ ಪತ್ತೆ ಹಚ್ಚಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಪಿಡಿಒ, ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೆ ಜಮೀನು ಮಾಲೀಕನಿಗೂ ನೋಟಿಸ್ ನೀಡಲಾಗಿದೆ ಎನ್ನುತ್ತಿದ್ದಾರೆ.
ಒಟ್ಟಾರೆ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿ ಇದ್ದರೂ, ಮಂಡ್ಯದಲ್ಲಿ ನಿರಂತರವಾಗಿ ಗೋವುಗಳ ಮಾರಣಹೋಮ ನಡೆಯುತ್ತಿದೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ.