ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಸಿಎಂ ಅರವಿಂದ್ ಕೇಜ್ರೀವಾಲ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
ಗುರುವಾರ ಕೇಜ್ರೀವಾಲ್ ಅವರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. 2ನೇ ಬಾರಿಗೆ ಈಡಿ ಕೇಜ್ರೀವಾಲ್ ಅವರನ್ನು ವಿಚಾರಣೆಗೆ ಕರೆದಿದ್ದು, ಈ ಹಿಂದೆ ನವೆಂಬರ್ 2 ರಂದು ಈಡಿ ಮುಂದೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು.
ಚುನಾವಣೆಯ ಹಿನ್ನಲೆಯಲ್ಲಿ ಮಧ್ಯಪ್ರದೇಶದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಸಿಎಂ ಅರವಿಂದ್ ಕೇಜ್ರೀವಾಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೇ ಕಾನೂನು ಬಾಹಿರ ಸಮನ್ಸ್ ಎಂದು ಹೇಳಿದ್ದ ಕೇಜ್ರೀವಾಲ್, ಸಮನ್ಸ್ ಹಿಂತೆಗೆಯುವಂತೆ ಆಗ್ರಹಿಸಿದ್ದರು. ಸದ್ಯ ಇದೀಗ ಮತ್ತೆ ಇಡಿ ಸಮನ್ಸ್ ಜಾರಿಗೊಳಿಸಿದ್ದು, ಡಿಸೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿದೆ.
ಇಡಿ ಬಿಜೆಪಿ ಆದೇಶದಂತೆ ಕೆಲಸ ಮಾಡ್ತಿದೆ
ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ, ನಿಮ್ಮ ನೋಟಿಸ್ ಅನ್ನು ವಾಪಸ್ಸು ಪಡೆದುಕೊಳ್ಳಿ. ಇದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇಡಿ ಬಿಜೆಪಿ ಆದೇಶದ ಮೇರೆಗೆ ಈ ಕೆಲಸವನ್ನು ಮಾಡುತ್ತಿದೆ. ಇನ್ನು ಇದನ್ನು ನಾನು ಒಪ್ಪುವುದಿಲ್ಲ, ತಕ್ಷಣ ತನ್ನ ಮೇಲೆ ಜಾರಿ ಮಾಡಿದ ನೋಟಿಸ್ ವಾಪಸ್ಸು ಪಡೆಯುವಂತೆ ಇಡಿಗೆ ಪತ್ರದ ಮೂಲಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.