ವಿಜಯಪುರ : ಸಿದ್ದರಾಮಯ್ಯ ಕಳೆದ ಬಾರಿ ಟಿಪ್ಪು ಸುಲ್ತಾನ್ ಜಯಂತಿ ಮಾಡಿದ್ದಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಡೆಪಾಸಿಟ್ ಹೋಯ್ತು. ಟಿಪ್ಪು ಸುಲ್ತಾನ್ ಪರ ಮಾತನಾಡಿದರೆ ಡಿಪಾಸಿಟ್ ಹೋಗೋದು ಗ್ಯಾರಂಟಿ. ಅವರಿಗೆ ರಾಜಕೀಯ ಭವಿಷ್ಯವೂ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಏನಾದರೂ ಮಾಡಲು ಹೋದರೆ, ಮುಂದಿನ ಸಲ.. ಇವರು ಯಾರು ಟಿಪ್ಪು ಸುಲ್ತಾನ್ ಪರವಾಗಿ ಮಾತನಾಡುತ್ತಿದ್ದಾರಲ್ಲ. ಮುಂದಿನ ವಿಧಾನಸಭಾ ನೋಡ್ರಿ, ಎಲ್ಲಾರದೂ ಡೆಪಾಸಿಟ್ ಹೋಗುತ್ತದೆ ಎಂದು ಕುಟುಕಿದರು.
ಟಿಪ್ಪು ಸುಲ್ತಾನನ ಬೆನ್ನು ಹತ್ತಿದಂಥವರಿಗೆ ಯಾರಿಗೂ ರಾಜಕೀಯ ಭವಿಷ್ಯವಿಲ್ಲ. ಅದ್ಯಾರು ಟಿಪ್ಪು ಸುಲ್ತಾನನ ಖಡ್ಗ ತಂದನಲ್ಲ.. ಇವ ವಿಜಯ್ ಮಲ್ಯ ಟಿಪ್ಪು ಖಡ್ಗ ತಗೊಂಡು ಬಂದ, ಓಡಿಹೋಗಿ ಲಂಡನ್ನಿನಲ್ಲಿ ಕುಳಿತ. ಅವ ಯಾವನೋ ಸಿನಿಮಾ ಮಾಡಲು ಹೋದ ಖಾನ್, ಅವನ ಪೆಂಡಾಲ್ ಎಲ್ಲಾ ಸುಟ್ಟು, ಅವನ ಮಾರಿ ಸಹಿತ ಸುಟುಗೊಂಡು ಹೋಯ್ತು ಎಂದು ಛೇಡಿಸಿದರು.
ಹಿಂದೂಗಳ ಸಂಹಾರ ಮಾಡ್ತೀನಿ ಅಂದವನ ಹೆಸರಿಡಬೇಕಾ?
ಯಾರು ನಮ್ಮ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ಅವರ ಹೆಸರಿಡಬೇಕು. ಅದಕ್ಕೆ ನಾವು ಮೈಸೂರು ಮಹಾರಾಜರ ಹೆಸರಿಡಬೇಕು ಅಂದಿದ್ದು. ಇಲ್ಲಿ ನಮ್ಮ ಸರ್ಕಾರ ಇದ್ದಾಗಲೇ ನಮ್ಮ ವಿಮಾನ ನಿಲ್ದಾಣಕ್ಕೆ ಬಸವಣ್ಣನವರ ಹೆಸರಿಟ್ಟಿದ್ದೇವೆ. ಅಲ್ಲಿ ಸಂಗೊಳ್ಳಿ ರಾಯಣ್ಣ, ಅಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಇವರೆಲ್ಲಾ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂಥವರು, ತ್ಯಾಗ ಮಾಡಿದವರು. ಅಂಥವರ ಹೆಸರಿಡಬೇಕು. ಇಡೀ ಹಿಂದೂಗಳ ನರ ಸಂಹಾರ ಮಾಡುತ್ತೇನೆ ಎಂದಂತಹ ಹೆಸರಿಡಬೇಕಾ? ಎಂದು ಶಾಸಕ ಯತ್ನಾಳ್ ಕಿಡಿಕಾರಿದರು.