ಗದಗ : ನಮ್ಮ ಸರ್ಕಾರದಲ್ಲಿ ಘೋಷಿಸಿರುವ ಯೋಜನೆಗಳಿಗೆ (ಉಚಿತ ಗ್ಯಾರಂಟಿ) ಅನುದಾನದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಭಿವೃದ್ಧಿ ಕೆಲಸಗಳು ನಿಂತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ನವೆಂಬರ್ ಅಂತ್ಯದವರೆಗೆ 70,814 ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಖರ್ಚು ಮಾಡಿತ್ತು. ನಮ್ಮ ಸರ್ಕಾರ 73,928 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಹಣವನ್ನು ಖರ್ಚು ಮಾಡಿಲ್ಲ ಎನ್ನುವುದು ಸುಳ್ಳು. 3,000 ಕೋಟಿ ರೂ.ಗಳಷ್ಟು ಮೊತ್ತವನ್ನು ಹೆಚ್ಚು ವೆಚ್ಚ ಮಾಡಿದ್ದೇವೆ. ನಾವು ಸರ್ಕಾರ ರೂಪಿಸಿದ್ದು ಮೇ 20ಕ್ಕೆ, ಬಜೆಟ್ ಮಂಡಿಸಿದ್ದು ಜುಲೈನಲ್ಲಿ, ಅದು ಜಾರಿಯಾಗಿದ್ದು ಆಗಸ್ಟ್ 1 ರಿಂದ. 4 ಗ್ಯಾರಂಟಿ ಗಳನ್ನು ಜಾರಿ ಮಾಡಿದ್ದು, 5ನೇ ಗ್ಯಾರಂಟಿ ಜನವರಿಯಲ್ಲಿ ಪ್ರಾರಂಭವಾಗಲಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆಗೆ ಹಣ ಒದಗಿಸುತ್ತೇವೆ
ಶಕ್ತಿ ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆಯೋ ಅಷ್ಟು ಹಣ ಒದಗಿಸಲಾಗುವುದು. ಈ ಯೋಜನೆಗೆ ಪ್ರತಿ ವರ್ಷ ವೆಚ್ಚವಾಗುವ ಹಣವನ್ನು ಕೆಎಸ್ಸಾರ್ಟಿಸಿಗೆ ಸರ್ಕಾರದಿಂದ ತುಂಬಿ ಕೊಡಲಾಗುವುದು. ಬಸ್ಸುಗಳ ದುರಸ್ತಿ ಹಾಗೂ ಹೊಸ ಬಸ್ಸುಗಳ ಖರೀದಿಯೂ ಆಗಲಿದೆ. ರಿಪೇರಿಗೆ ಅನುದಾನವನ್ನು ಒದಗಿಸಲಾಗಿದೆ. ಅನುದಾನವಿಲ್ಲ ಎಂದಿರುವ ಅಧಿಕಾರಿಗಳ ಹೆಸರು ನೀಡಿದರೆ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.