ಶಿವಮೊಗ್ಗ : ಬೆಳಗಾವಿಯ ಗ್ರಾಮಾಂತರದಲ್ಲಿ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ಶಿವಮೊಗ್ಗ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ.
ನಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ಬೆಳಗಾವಿಯಲ್ಲಿ ಕ್ಲುಲಕ ಕಾರಣಕ್ಕೆ ಪ್ರೇಮಿಗಳಿಬ್ಬರು ಪ್ರೀತಿಸಿ ಮನೆಬಿಟ್ಟು ಹೋಗಿದ್ದಕ್ಕೆ ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ, ಹಲ್ಲೆ ಮಾಡಿದ್ದಾರೆ. ಇದು ಇಡೀ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ನಾವು ಯಾವ ಸಮಾಜದಲ್ಲಿ ಇದ್ದೇವೆ ಎನ್ನುವುದು ಪ್ರಶ್ನೇ ಕಾಡುತ್ತಿದೆ. ಸರ್ಕಾರ ಕೂಡಲೇ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಬೇಕಿತ್ತು. ಮುಖ್ಯಮಂತ್ರಿಗಳು ಕೂಡಲೇ ಈ ಘಟನೆಗೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕಿತ್ತು. ಇಡೀ ರಾಜ್ಯದ ಜನ ತಲೆತಗ್ಗಿಸುವ ಘಟನೆ ಇದ್ದಾಗಿದ್ದು, ಕೇಂದ್ರದಿಂದ ಘಟನೆಯ ಸತ್ಯ ಪರಿಶೀಲನೆಗೆ ಸತ್ಯಶೋಧನ ತಂಡ ಬಂದಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳಿಗೂ ಅಕ್ಕ ತಂಗಿಯರಿದ್ದಾರೆ
ಮುಖ್ಯಮಂತ್ರಿಗಳಿಗೂ ಅಕ್ಕ ತಂಗಿಯರಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಏನು ಬೇಕಾದರೂ ಮಾಡಬಹುದು ಎಂಬ ಸ್ಥಿತಿಯಲ್ಲಿ ಕೀಡಿಗೇಡಿಗಳಿದ್ದಾರೆ. ಸರ್ಕಾರ ಘಟನೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಘೋಷಣೆ ಕೂಗಿದ್ದಾರೆ.