ಮಂಡ್ಯ : ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಪ್ರಸ್ತಾವನೆ ವಿಚಾರ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಟಿಪ್ಪು ಒಬ್ಬ ಮತಾಂಧ, ಮಂಡ್ಯದಲ್ಲಿ ಅವನ ಚರಿತ್ರೆ ಇದೆ. ಕೊಡಗಿನಲ್ಲಿ ಲಕ್ಷಾಂತರ ಹಿಂದೂಗಳ ಮತಾಂತರ ಹಾಗೂ ಹತ್ಯೆ ಮಾಡಿದ್ದ ಚರಿತ್ರೆ ಇದೆ. ಮೇಲುಕೋಟೆಯಲ್ಲಿ ಬ್ರಾಹ್ಮಣರನ್ನ ಕಟ್ಟಾಕಿ ಕತ್ತರಿಸಿ ಹಾಕಿದ್ದು ಇದೆ. ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ಶಾಸಕರಿಗೆ ಆಯಾ ಕ್ಷೇತ್ರದ ಜನಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಟಿಪ್ಪು ಸ್ವತಂತ್ರ ಹೋರಾಟಗಾರ ಎಂಬ ಕಾಂಗ್ರೆಸ್ ನಾಯಕರ ಸಮರ್ಥನೆಗೆ ಪ್ರತಿಕ್ರಿಯಿಸಿದ ಅವರು, ಮೈಸೂರು ಆಡಳಿತ ನಡೆಸುತ್ತಿದ್ದವರು ಒಡೆಯರ್ ವಂಶಸ್ಥರು. ಹೈದರಾಲಿ ಚಾಕ್ರಿ, ಕೂಲಿಗೆ ಬಂದವನು. ಒಡೆಯರ್ಗೆ ಮೋಸ ಮಾಡಿ ಸಿಂಹಾಸನ ಏರೋಕೆ ಬಂದಿದ್ರು. ಟಿಪ್ಪುನ ಹೋರಾಟಗಾರ ಅಂತಾರಲ್ಲ ನಾಚಿಕೆ ಆಗಲ್ವ ಅವರಿಗೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಟಿಪ್ಪು ಸಿದ್ದಾಂತದ ಮೇಲೆ ಬಂದಿದೆ
ಟಿಪ್ಪು ಸುಲ್ತಾನ್, ಹೈದರಾಲಿ ಡ್ಯಾಂ ಕಟ್ಟಿಸಿದ್ದಾರಾ? ಒಂದು ಕೆರೆ ಕಟ್ಟಿಸಿದ್ದಾರಾ? ಆಸ್ಪತ್ರೆ, ಶಿಕ್ಷಣ ಸಂಸ್ಥೆ ಕಟ್ಟಿಸಿದ್ದಾರಾ? ಎಲ್ಲವನ್ನು ಕಟ್ಟಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರ್. ವೋಟ್ ಗೋಸ್ಕರ ಕಾಂಗ್ರೆಸ್ ನವರು ಹೋರಾಟಗಾರ ಅಂತಾರೆ. ವೋಟಿಗೋಸ್ಕರ ಎಂತಹ ಕೀಳು ಮಟ್ಟಕ್ಕೂ ಕಾಂಗ್ರೆಸ್ ನವರು ಹೋಗ್ತಾರೆ. ಕಾಂಗ್ರೆಸ್ ಟಿಪ್ಪು ಸಿದ್ಧಾಂತದ ಮೇಲೆ ಬಂದಿದೆ. ನಾವೂ ಹಿಂದುತ್ವದ ಸಿದ್ಧಾಂತದ ಮೇಲೆ ಬಂದಿದ್ದೇವೆ. ಜನರು ಅದರ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.