ಬೆಳಗಾವಿ : ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ಧೋರಣೆಯ ವಿರುದ್ಧ ನಾಳೆ ಬಿಜೆಪಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಳಗಾವಿ ತಾಲೂಕು ವಂಟಮೂರಿ ಗ್ರಾಮದ ಪರಿಶಿಷ್ಟ ಪಂಗಡದ ಅಮಾಯಕ ಮಹಿಳೆಯನ್ನು ವಿವಸ್ತ್ರಗೊಳಿಸಿ ನಡೆದಿರುವ ದೌರ್ಜನ್ಯ ಖಂಡಿಸಿ ಬೆಳಗಾವಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳ ಮಾತನಾಡಿದ ಅವರು, ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆ ನಾಗರೀಕ ಸಮಾಜಕ್ಕೆ ಅಂಟಿದ ಕಪ್ಪುಚುಕ್ಕೆಯಾಗಿದೆ. ಅಮಾಯಕ ಮಹಿಳೆಯನ್ನು ಬೆತ್ತಲೆ ಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು ಅತ್ಯಂತ ಹೇಯ ಕೃತ್ಯ. ಈ ಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವು ತಲೆ ತಗ್ಗಿಸುವಂತೆ ಮಾಡಿದೆ ಎಂದು ಬೇಸರಿದ್ದಾರೆ.
ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ
ನಿನ್ನೆ ದಿನ ಹೈಕೋರ್ಟ್, ಈ ದುರ್ಘಟನೆ ನಡೆಯಲು ಸರ್ಕಾರ ಹೇಗೆ ಬಿಟ್ಟಿದೆ? ಪೊಲೀಸರ ಗಸ್ತು ಏಕೆ ಇರಲಿಲ್ಲ? ರಾಜ್ಯ ಸರಕಾರ ಇಂಥ ಘಟನೆ ಆಗದಂತೆ ತಡೆಯಲು ಏನು ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿ ಸಂತ್ರಸ್ತೆಯ ಸಹಾಯಕ್ಕೆ ಧಾವಿಸದ ಕುರಿತು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ. ಆದರೂ, ರಾಜ್ಯ ಸರ್ಕಾರವು ಇದನ್ನು ಈ ಕ್ಷಣಕ್ಕೂ ಗಂಭೀರವಾಗಿ ಪರಿಗಣಿಸಿಲ್ಲದಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಹೆಣ್ಣು ಮಕ್ಕಳ ಬಗ್ಗೆ ಇರುವ ತಾತ್ಸಾರ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ಸೌಜನ್ಯಕ್ಕೂ ಸಂತ್ರಸ್ತೆಯನ್ನ ಭೇಟಿಯಾಗಿಲ್ಲ
ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೌಜನ್ಯಕ್ಕಾದರೂ ಸಂತ್ರಸ್ತೆಯನ್ನು ಭೇಟಿಯಾಗುವ ಮಾನವೀಯ ಕಾಳಜಿ ಇದುವರೆಗೂ ತೋರಿಲ್ಲ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕಾಟಾಚಾರಕ್ಕೆ ಭೇಟಿಯಾಗಿ ಸಾಂತ್ವನ ಹೇಳಿರುವುದನ್ನು ಬಿಟ್ಟರೆ ಇನ್ಯಾರು ಈ ಕಡೆ ತಲೆಹಾಕಿಲ್ಲ ಎಂದು ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯದ ಕುರಿತು ಇಡೀ ದೇಶದಲ್ಲೇ ಚರ್ಚೆ ಆಗುತ್ತಿದೆ. ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಸರ್ಕಾರ, ಬೆಳಗಾವಿಯಲ್ಲಿದ್ದರೂ ಸಂತ್ರಸ್ತೆಯ ಬಗ್ಗೆ ವಿಚಾರಿಸಲಿಲ್ಲ.
ಇಂತಹ ಘಟನೆಯನ್ನು ಖಂಡಿಸಿ ರಾಜ್ಯದಾದ್ಯಂತ ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ.
– ಶ್ರೀ… pic.twitter.com/sWqsRd7mUd
— BJP Karnataka (@BJP4Karnataka) December 15, 2023