ಬೆಂಗಳೂರು : ಪಾಪ ಆ ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಅಂತ ಬಿಜೆಪಿ ನಾಯಕರು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದರು. ಇದೀಗ ಬೇರೆ ಗತಿಯೇ ಇಲ್ಲದೆ ಅವರ ಪಾದಕ್ಕೆ ಬಿದ್ದಿರುವುದನ್ನು ರಾಜ್ಯದ ಜನತೆ ತಮಾಷೆಯಾಗಿ ನೋಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬಿಜೆಪಿ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನಮ್ಮ ಸರ್ಕಾರದ ವಿರುದ್ಧ ಬಿಜೆಪಿ ಇಂದು ಬೆಳಗಾವಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಸ್ವಾಗತಿಸುತ್ತೇನೆ ಎಂದು ಕುಟುಕಿದ್ದಾರೆ.
ವಿಧಾನಸಭೆಯಲ್ಲಿ ನಮ್ಮ ಸರ್ಕಾರದ ವಿರುದ್ಧ ಧರಣಿ ನಡೆಸಿ ಬಿಜೆಪಿ ನಾಯಕರು ಬಳಲಿ ಬೆಂಡಾಗಿ, ಸೋತು ಸುಣ್ಣವಾಗಿ ಹೋಗಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಕರೆತಂದು ಬೆಳಗಾವಿಯಲ್ಲಿ ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.
ಉ.ಕರ್ನಾಟಕದ ಬಗ್ಗೆ ಪ್ರೀತಿ, ಕಾಳಜಿ ಇಲ್ಲ
ರಾಜ್ಯದ ಬಿಜೆಪಿ ನಾಯಕರ ದಮ್ಮು-ತಾಕತ್ ಎಲ್ಲವೂ ಮೊನ್ನೆ ಸದನದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಯಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ದಿ ಯೋಜನೆಗಳ ಬಗ್ಗೆ ಚರ್ಚೆ ನಡೆಯಬೇಕಾಗಿದ್ದ ಸಮಯವನ್ನು ಅನಗತ್ಯವಾದ ಪ್ರತಿಭಟನೆಯ ಮೂಲಕ ಬಿಜಿಪಿ ಶಾಸಕರು ವಿಧಾನಸಭೆಯಲ್ಲಿ ಪೋಲು ಮಾಡಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಪ್ರೀತಿ, ಕಾಳಜಿ ಇದ್ದಿದ್ದರೆ ಇಂತಹ ಮೂರ್ಖತನದ ಕೆಲಸವನ್ನು ಮಾಡುತ್ತಿರಲಿಲ್ಲ. ಇಂತಹವರಿಗೆ ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವ ಯಾವ ಹಕ್ಕಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.