Wednesday, January 22, 2025

ಸಂಸದ ಪ್ರತಾಪ್ ಸಿಂಹರನ್ನ ವಿಚಾರಣೆಗೆ ಒಳಪಡಿಸಬೇಕು : ಸಿದ್ದರಾಮಯ್ಯ

ಬೆಂಗಳೂರು : ಸಂಸತ್ ಭವನದಲ್ಲಿ ಇಂದು ನಡೆದಿರುವ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಂಸತ್ ಭವನದ ಮೇಲೆ ಇಂದು ನಡೆದಿರುವ ದಾಳಿ ಖಂಡನೀಯ, ಅತ್ಯಂತ ಆಘಾತಕಾರಿಯಾದುದು. ಸಂಸದರೆಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನುವುದು ಸಮಾಧಾನದ ಸಂಗತಿ ಎಂದು ಹೇಳಿದ್ದಾರೆ.

ಅತ್ಯಂತ ಬಿಗಿಭದ್ರತೆಯ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇದು ಸಂಪೂರ್ಣವಾಗಿ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದು ಸ್ಪಷ್ಟವಾಗಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನು ದೇಶದ ಮುಂದಿಡುವುದು ಕೇಂದ್ರ ಸರ್ಕಾರ, ಬಹಳ ಪ್ರಮುಖವಾಗಿ ಗೃಹ ಸಚಿವ ಅಮಿತ್ ಶಾ ಅವರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರೇ ಪಾಸ್ ನೀಡಿರುವ ವರದಿಗಳು ಬರುತ್ತಿವೆ. ಈ ಸುದ್ದಿ ನಿಜವಾಗಿದ್ದಲ್ಲಿ ಈ ಸಂಸದರನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಯುವಕರು ಪ್ರತಾಪ್ ಸಿಂಹ ಪರಿಚಯಸ್ಥರೇ?

ಪಾಸ್ ನೀಡಿರಬೇಕಾಗಿದ್ದರೆ ಯುವಕರು ಸಂಸದ ಪ್ರತಾಪ್ ಸಿಂಹ ಅವರ ಪರಿಚಯಸ್ಥರಾಗಿರಬಹುದು. ಪರಿಚಯಸ್ಥರಲ್ಲದೆ ಇದ್ದರೆ ಅಪರಿಚಿತರಿಗೆ ಪಾಸುಗಳನ್ನು ಹೇಗೆ ನೀಡಲಾಯಿತು ಎನ್ನುವ ಪ್ರಶ್ನೆ ಕೂಡಾ ಹುಟ್ಟುತ್ತದೆ. ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆಯುವ ಅನಾಹುತ ಕೂಡಾ ಶಿಕ್ಷಾರ್ಹ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES