ಬೆಳಗಾವಿ : ಲೋಕಸಭಾ ಚುನಾವಣೆ ನಂತರ ಜೆಡಿಎಸ್ ಪಕ್ಷದಲ್ಲಿ 5 ಜನ ಶಾಸಕರು ಮಾತ್ರ ಉಳಿಯುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಸ್ತಿತ್ವ ಲೋಕಸಭಾ ಚುನಾವಣೆ ಮುಂಚೆ ಏನಾಗುತ್ತೆ ಅನ್ನುವುದರ ಬಗ್ಗೆ ಕಾಳಜಿವಹಿಸಿದ್ರೆ ಒಳ್ಳೆಯದು ಎಂದು ಹೇಳಿದರು.
50 ರಿಂದ 60 ಜನ ಶಾಸಕರು ಇದ್ದರೆ ಅವರೇ ಸಿಎಂ ಆಗ್ತಾರೆ. ಒಡೆಯೋದು ಏನೂ ಇಲ್ಲ. ಸುಮ್ಮನೆ ಸುದ್ದಿಯಲ್ಲಿ ಇರೋಕೆ ಮಾತನಾಡುತ್ತಾರೆ. ಲೋಕಸಭೆ ಬಳಿಕ 5 ಜನ ಶಾಸಕರು ಮಾತ್ರ ಅವರ ಪಕ್ಷದಲ್ಲಿ ಇರ್ತಾರೆ. ಲೋಕಸಭಾ ಚುನಾವಣೆಗೂ ಮುನ್ನವೇ ನೋಡಿ ಜೆಡಿಎಸ್ ಹಾಗೂ ಬಿಜೆಪಿ ಏನು ಆಗುತ್ತೆ ಅಂತ ಎಂದು ಲೇವಡಿ ಮಾಡಿದರು.
ದಳ ಒಡೆದು ಹೋಗಿದೆ
ಜೆಡಿಎಸ್ ಪಕ್ಷ ಈಗಾಗಲೇ ಅಸ್ತಿತ್ವ ಕಳೆದುಕೊಂಡಿದೆ. ಚುನಾವಣೆಗೂ ಮುನ್ನವೇ ನಾನು ಹೇಳಿದ್ದೆ. ರಾಜ್ಯದ ಜನರು ಸಹ ಅವರ ಜೊತೆ ಇಲ್ಲ. ದಳ ಒಡೆದು ಹೋಗಿದೆ, ಬಿಜೆಪಿ ಜೊತೆ ಸೇರಿ ಜಾತ್ಯಾತೀತ ತತ್ವವನ್ನು ಜೆಡಿಎಸ್ ಕಳೆದುಕೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಚಾಟಿ ಬೀಸಿದರು.