ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಲಿದೆ.
ಈ ಹಿನ್ನೆಲೆಯಲ್ಲಿ, ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದ ಗುಪ್ಯಾರ್ ಪಕ್ಷಗಳು (ಪಿಎಜಿಡಿ) ಸುಪ್ರೀಂ ಕೋರ್ಟ್‌ನಿಂದ ವಿಶೇಷ ಸ್ಥಾನಮಾನ ಪುನರ್‌ಸ್ಥಾಪಿಸುವ ಕುರಿತು ತೀರ್ಪು ಬರುವ ಭರವಸೆಯನ್ನು ವ್ಯಕ್ತಪಡಿಸಿವೆ.
ಇದನ್ನೂ ಓದಿ: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಸಂವಿಧಾನ ಪೀಠವು ತೀರ್ಪು ಪ್ರಕಟಿಸಲಿದೆ.
ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ 370ನೇ ವಿಧಿ ಅಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸಂವಿಧಾನ ಪೀಠವು, 16 ದಿನಗಳ ಕಾಲ ವಾದ- ಪ್ರತಿವಾದ ಆಲಿಸಿ ಸೆ. 5ರಂದು ತೀರ್ಪು ಕಾಯ್ದಿರಿಸಿತ್ತು.
ಬಿಗಿ ಭದ್ರತೆ: ಸುಪ್ರೀಂಕೋರ್ಟ್ ಆದೇಶದ ಹಿನ್ನಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ.
ಈ ಸಂಬಂಧ ಕಳೆದ ಎರಡು ವಾರಗಳಲ್ಲಿ 10 ಕಣಿವೆ ಜಿಲ್ಲೆಗಳಲ್ಲಿ ಭದ್ರತಾ ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ. ಡಿಸೆಂಬರ್ 7 ರಂದು ಕಾಶ್ಮೀರದ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಐಪಿಸಿ ಸೆಕ್ಷನ್ 144 ರ ಅಡಿಯಲ್ಲಿ ಕೋಮು ದ್ವೇಷವನ್ನು ಹರಡಬಹುದಾದ ವಿಷಯದ ಹರಡುವಿಕೆಯನ್ನು ಒಳಗೊಂಡಿರುವ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.