ಬೆಂಗಳೂರು: ಮೂರ್ನಾಲ್ಕು ವರ್ಷಗಳಿಂದ ಕೆಪಿಎಸ್‌ಸಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಯಾವುದೇ ಅಧಿಸೂಚನೆ ನೀಡದ ಕಾರಣ ಉದ್ಯೋಗಾಕಾಂಕ್ಷಿಗಳು ನಿರಾಸೆ ಮೂಡಿತ್ತು. ಇದೀಗ ಕೆಎಎಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್ (ಕರ್ನಾಟಕ ನಾಗರಿಕ ಸೇವೆ) ಸೇರಿದಂತೆ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಒಟ್ಟು 276 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಕರ್ನಾಟಕದ ಅಭಿವೃದ್ಧಿಯಲ್ಲಿ ಎಸ್.ನಿಜಲಿಂಗಪ್ಪನವರ ಕೊಡುಗೆ ಅಪಾರ : ಸಿಎಂ ಸಿದ್ದರಾಮಯ್ಯ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿನ (ಸೇವೆಗಳು-2) ಸಹಾಯಕ ಆಯುಕ್ತ (ಕಿರಿಯ ಶ್ರೇಣಿ) 20 ಹುದ್ದೆಗಳು ಸೇರಿ ಒಟ್ಟು 105 ಹುದ್ದೆಗಳು ಗ್ರೂಪ್ ‘ಎ’ನಲ್ಲಿವೆ. ಕಂದಾಯ ಇಲಾಖೆಯಲ್ಲಿನ ತಹಶೀಲ್ದಾರ್ (ಗ್ರೇಡ್-2) 26 ಹುದ್ದೆಗಳು ಸೇರಿ ಒಟ್ಟು 171 ಹುದ್ದೆಗಳು ಗ್ರೂಪ್ ‘ಬಿ’ ವೃಂದಕ್ಕೆ ಸೇರಿವೆ.
ಎಲ್ಲ ಇಲಾಖೆಗಳಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಖಾಲಿ ಹುದ್ದೆಗಳ ಮಾಹಿತಿಯನ್ನು ಸಂಗ್ರಹಿಸಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸದ್ಯದಲ್ಲೇ ನೇಮಕಾತಿ ಪ್ರಾಧಿಕಾರವಾದ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಪ್ರಸ್ತಾವ ಸಲ್ಲಿಕೆ ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.