ಕನ್ನಡ ಚಿತ್ರರಂಗದಲ್ಲಿ 600ಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ, 200ಕ್ಕೂ ಹೆಚ್ಚು, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದವರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ಮದುವೆ ಮಾಡಿನೋಡು’ ಮತ್ತು ‘ಸಂತ ತುಕಾರಾಮ್’ ಸಿನಿಮಾಗಳಿಗೆ ಲೀಲಾವತಿ ಅವರು 2 ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

1953ರಲ್ಲಿ ಬಿಡುಗಡೆಯಾಗಿದ್ದ ‘ಚಂಚಲ ಕುಮಾರಿ’ ಚಿತ್ರದ ಮೂಲಕ ಲೀಲಾವತಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಲೀಲಾವತಿ ಅವರು ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಜೀವಮಾನ ಸಾಧನೆಗಾಗಿ 1999ರಲ್ಲಿ ಲೀಲಾವತಿ ಅವರು ಡಾ. ರಾಜ್ಕುಮಾರ್ ಪ್ರಶಸ್ತಿ ಪಡೆದರು.

2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು.

ಬಾಲ್ಯದಿಂದಲೇ ಕಷ್ಟದ ಜೀವನ ಕಂಡ ಕೇವಲ ಎರಡನೇ ತರಗತಿಗೆ ಓದು ನಿಲ್ಲಿಸಿದ ಇವರ ಬದುಕಿನ ಕಥೆ ನಿಜಕ್ಕೂ ಸಾಹಸಗಥೆ. ಬಡತನ, ಸವಾಲು, ಅವಮಾನಗಳನ್ನು ಮೆಟ್ಟಿನಿಂತು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಇವರ ಬದುಕೇ ಒಂದು ವಿಶ್ವವಿದ್ಯಾಲಯ.