Monday, December 23, 2024

ಪ್ರಧಾನಿ ಹಠದಿಂದಾಗಿ, ಬಿಜೆಪಿಯೇತರ ರಾಜ್ಯಗಳ ಹತ್ತಿಕ್ಕುವ ಪ್ರಯತ್ನ: ಎಎಪಿ

ವಿಜಯನಗರ: ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಪಾಲನ್ನು ಕೇಳುತ್ತಿಲ್ಲ. ಬರ ಪರಿಹಾರಕ್ಕೆ ಒತ್ತಾಯ ಮಾಡುತ್ತಿಲ್ಲ. ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಹಣ ನೀಡಲಾಗುತ್ತಿದೆ. ಬಿಜೆಪಿಯೇತರ ರಾಜ್ಯಗಳನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆ. ಮೋದಿಯವರ ಹಠದಿಂದಾಗಿ ಬಿಜೆಪಿಯೇತರ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ದೆಹಲಿಯಲ್ಲಿಯೂ ಅಧಿಕಾರ ಹತ್ತಿಕ್ಕಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಆಡಳಿತ ಹದಗೆಟ್ಟಿದೆ. ಬೆಳಗಾವಿಯಲ್ಲಿ ಸದನ ಆರಂಭವಾಗಿ ಮೂರು ದಿನ ಕಳೆದರೂ ಹಿಂದುಳಿದ ಭಾಗಗಳ ಕುರಿತು ಚರ್ಚೆಯಾಗಿಲ್ಲ. ಶೇ 40 ರಷ್ಟು ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು, ಎಎಪಿಯ ಯೋಜನೆಗಳನ್ನು ಕದ್ದು ಕಾಂಗ್ರೆಸ್ ಅಧಿಕಾರಕ್ಕೇರಿದೆ. ಅವರ ಗ್ಯಾರಂಟಿ ಯೋಜನೆಗಳು ಯಾರಿಗೂ ತಲುಪುತ್ತಿಲ್ಲ.

ಏಳು ತಿಂಗಳೂ ಕಳೆದರೂ ಖಾತರಿಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಬರದಿಂದಾಗಿ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರೂ, ಸರ್ಕಾರ ಆದ್ಯತೆಯ ಮೇರೆಗೆ ಪರಿಹಾರ ಕಂಡುಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ತೀವ್ರ ಸಂಕಷ್ಟ ಎದುರಾಗಿದ್ದು, ರಾಜ್ಯ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ ಎಂದು ದೂರಿದರು.

ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರ ಉಚ್ಚಾಟನೆ : ಹೆಚ್​ಡಿ ದೇವೇಗೌಡ

ರಾಜ್ಯದಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷವೇ ಇಲ್ಲ. ಸದನದಲ್ಲಿ ಬರ ಪರಿಸ್ಥಿತಿಯನ್ನು ಚರ್ಚೆಗೆ ತೆಗೆದುಕೊಳ್ಳಲು ಬಿಜೆಪಿ ನಾಯಕರೇ ಅವಕಾಶ ನೀಡಿಲ್ಲ. ಭ್ರಷ್ಟರಹಿತ ಸರ್ಕಾರ ನೀಡುತ್ತೇವೆ ಎಂದು ಮೋದಿ ಹೇಳುತ್ತಾರೆ. ಆದರೆ, ಅದೇ ಭ್ರಷ್ಟಾಚಾರದಿಂದಲೇ ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದರು. ಮಾಡಾಳ್ ವಿರೂಪಾಕ್ಷಪ್ಪ ಸಿಕ್ಕಿಬಿದ್ದರು. ಕುಟುಂಬ ರಾಜಕಾರಣದಿಂದ ದೇಶ ಅಭಿವೃದ್ಧಿಯಾಗಲ್ಲ ಎಂದು ಮೋದಿ ಹೇಳುತ್ತಾರೆ ಆದರೆ, ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಲಾಗಿದೆ ಎಂದು ದೂರಿದರು.

ಕಾಂಗ್ರೆಸ್ ಕೂಡ ಇದರಿಂದ ಹೊರತಾಗಿಲ್ಲ. ಒಂದೇ ಕುಟುಂಬದ ಎರಡ್ಮೂರು ಮಂದಿ ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಮತ್ತು ಮಗ, ಡಿಕೆ ಶಿವಕುಮಾರ್ ಮತ್ತು ಅವರ ತಮ್ಮ, ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆ ಹೀಗೆ ಕುಟುಂಬ ರಾಜಕಾರಣವೇ ಕಣ್ಮುಂದೆ ಇದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ರೈತರ ವಿಚಾರದಲ್ಲಿ ಗಮನಹರಿಸಬೇಕು. ಕಬ್ಬು ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರಿಗೆ ಕರೆಂಟ್ ಕೊಡುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಜನರ ಮುಂದಿಡಲೆಂದೇ ಹಳ್ಳಿ ಹಳ್ಳಿಗಳಿಗೆ ತೆರಳುತ್ತಿದ್ದೇವೆ. ಕಳೆದ 70 ವರ್ಷಗಳಿಂದ ಆಳಿದ ಪಕ್ಷಗಳಿಗೆ ಪರ್ಯಾಯವಾಗಿರುವುದು ಎಎಪಿ. ಇದನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇವೆ ಎಂದರು.

ಸಮಸ್ಯೆಗಳನ್ನು ಜನರ ಮುಂದಿಡಲು ಅರಳಿಕಟ್ಟೆ ಕಾರ್ಯಕ್ರಮ:
ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಮೂರು ವರ್ಷ ಪ್ರತಿಭಟನೆ ನಡೆಸಿದರು. ಈ ಎಲ್ಲಾ ಸಮಸ್ಯೆಗಳನ್ನು ಜನರ ಮುಂದಿಟ್ಟು, ನಮಗೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಜಾತಿ ರಾಜಕಾರಣ, ಕುಟುಂಬ ರಾಜಕಾರಣವನ್ನು ಧಿಕ್ಕರಿಸಿ ಎಎಪಿಗೆ ಅವಕಾಶ ನೀಡಿ ಎಂದು ಜನರನ್ನು ಕೇಳುತ್ತೇವೆ. ಉತ್ತಮವಾದ ಆಸ್ಪತ್ರೆಗಳು, ಉತ್ತಮ ಶಿಕ್ಷಣವನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. 100ರಲ್ಲಿ ಶೇ 75ರಷ್ಟು ಗೆದ್ದಿರುವ ಶಾಸಕರ ಆಸ್ತಿ 100 ಕೋಟಿ ರೂ.ಗೂ ಅಧಿಕವಾಗಿದೆ. ಇದೆಲ್ಲವೂ ಹೇಗೆ ಬಂತು. ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವನ್ನು ಹುಡುಕಿ. ಪ್ರತಿ ಜಿಲ್ಲೆಯಲ್ಲೂ, ತಾಲ್ಲೂಕಿನ ಹಳ್ಳಿಗಳಲ್ಲಿ ಅರಳಿಕಟ್ಟೆ; ಬನ್ನಿ ಮಾತನಾಡೋಣ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಹಳ್ಳಿಗಳಲ್ಲಿ ಶಿಕ್ಷಣದ ಗುಣಮಟ್ಟ ಸರಿಯಾಗಿದೆಯಾ? ಆರೋಗ್ಯದ ವ್ಯವಸ್ಥೆ, ರೈತರ ಶ್ರಮಕ್ಕೆ ಬೆಲೆ, ಯುವಕರಿಗೆ ಅವಕಾಶ, ಮಹಿಳೆಯರಿಗೆ ಸಮಾನ ಹಕ್ಕು, ಭ್ರಷ್ಟಾಚಾರ ನಿರ್ಮೂಲನೆ, ಕುಟುಂಬ ರಾಜಕಾರಣ ನಿರ್ಮೂಲನೆಯ ವಿಚಾರಗಳನ್ನಿಟ್ಟುಕೊಂಡು ನಾವು ಹಳ್ಳಿ ಹಳ್ಳಿಗೆ ತೆರಳುತ್ತಿದ್ದೇವೆ. ಜಾತಿ ರಾಜಕಾರಣ ನಡೆಯುತ್ತಿದೆ. ಬಿಜೆಪಿ ನಾಯಕ ಗೂಳಿಹಟ್ಟಿ ಶೇಖರ್ ಅವರಿಗೆ ಆಗಿರುವುದು ತಪ್ಪು. ಈ ಘಟನೆಯು ಸರಿಯಲ್ಲ. ಅವರ ಜಾತಿಯನ್ನು ಕೇಳಿ ಆಹ್ವಾನ ವಿಲ್ಲ ಎಂದು ಹೇಳಿದ್ದರೆ ತಪ್ಪು. ಇಂತಹ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಿಗೆ ಅರಿವು ಮೂಡಿಸುವುದೇ ನಮ್ಮ ಕೆಲಸ ಎಂದು ಹೇಳಿದರು.

ಮುಂದಿನ ಜಿಲ್ಲಾ ಮತ್ತು ತಾಲ್ಲೂಕು ಚುನಾವಣೆಯಲ್ಲಿ ನಾವು ಪ್ರಯತ್ನ ಮಾಡುತ್ತೇವೆ. ಸಂಸತ್ತಿನ ಚುನಾವಣೆಗೆ ರಾಷ್ಟ್ರ ಮಟ್ಟದ ನಾಯಕರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಮುಂದಿನ ಏಳರಿಂದ ಎಂಟು ತಿಂಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇವೆ. ಕಳೆದ ವಿಧಾನಸಭೆಯಲ್ಲಿ ಹೆಚ್ಚಿನ ಜನರನ್ನು ಪಕ್ಷದಿಂದ ನಿಲ್ಲಿಸಲಾಗಿತ್ತು. ಉಚಿತ ಯೋಜನೆಗಳಿಂದ ದೇಶ ಅಭಿವೃದ್ಧಿಯಾಗಲ್ಲ ಎಂದು ಪ್ರಧಾನಿ ಹೇಳಿದರು. ಆದರೆ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯೇ ಉಚಿತಗಳನ್ನು ಘೋಷಿಸಿದೆ. ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಿರುವುದು ಬಿಜೆಪಿಯ ಉದ್ದೇಶಪೂರ್ವಕ ಕೃತ್ಯವಾಗಿದ್ದು, ಅದು ಸರಿಯಲ್ಲ ಎಂದರು.

RELATED ARTICLES

Related Articles

TRENDING ARTICLES