ವಿಜಯಪುರ : ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ 108 ಆಂಬ್ಯುಲೆನ್ಸ್ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿಯಾಗಿ ಗರ್ಭಿಣಿ ಹಾಗೂ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದಿದೆ.
ಭಾಗ್ಯಶ್ರೀ ರಾವುತಪ್ಪ ಪಾರಣ್ಣನವರ (19) ಮೃತ ತಾಯಿ. ಆರೋಗ್ಯದಲ್ಲಿ ಏರುಫೇರಾದ ಕಾರಣ ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡುವಂತೆ ತಾಳಿಕೋಟೆ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದರು. ಈ ಹಿನ್ನಲೆ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುವ ವೇಳೆ ಈ ರ್ಘಟನೆ ನಡೆದಿದೆ.
ಮೃತ ಭ್ಯಾಗ್ಯಶ್ರೀಗೆ ರಾವುತಪ್ಪ ಎಂಬರೊಂದಿಗೆ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹವಾಗಿತ್ತು. ಮೊದಲ ಹೆರಿಗೆಗಾಗಿ ತವರು ಮನೆಗೆ ತೆರಳಿದ್ದ ಭಾಗ್ಯಶ್ರೀಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ತವರು ಮನೆ ನಾವದಗಿಯಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ನಡೆದ ಅಪಘಾತದಲ್ಲಿ ಮಹಿಳೆ ಹಾಗೂ ಹೊಟ್ಟೆಯಲ್ಲಿದ್ದ ಕಂದಮ್ಮ ಸಾವನ್ನಪ್ಪಿದೆ.
ವೈದ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನ
ಇತ್ತ ಮೃತ ಭಾಗ್ಯಶ್ರೀ ಪೋಷಕರು ತಾಳಿಕೋಟೆ ಸಮುದಾಯ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ವೈದ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಅಪಘಾತದಲ್ಲಿ ಆಂಬ್ಯುಲೆನ್ಸ್ ನಲ್ಲಿದ್ದ ಇಬ್ಬರು ಸ್ಟಾಪ್ ನರ್ಸ್ ಓರ್ವ ಸಹಾಯಕನಿಗೆ ಗಾಯ, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ತಾಳಿಕೋಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.