Wednesday, January 22, 2025

ತಿಮ್ಮಪ್ಪನಿಗೆ ಬೇಡವಾಯ್ತಾ ನಂದಿನಿ ತುಪ್ಪ? : ಕೆಎಂಎಫ್-ತಿರುಪತಿ ನಡುವಿನ ಸಂಬಂಧ ಮತ್ತೆ ಕಟ್?

ಬೆಂಗಳೂರು : ತಿರುಪತಿ ಲಡ್ಡು ಅಂದ್ರೆ ಪ್ರತಿಯೊಬ್ಬ ಭಕ್ತರಿಗೂ ಅಚ್ಚುಮೆಚ್ಚು. ಇಲ್ಲಿಯವರೆಗೆ ತಿಮ್ಮಪ್ಪನ ಲಡ್ಡು ಪ್ರಸಾದದ ಸ್ವಾದಿಷ್ಟ ರುಚಿಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಆದರೆ, ಇನ್ಮುಂದೆ ತಿರುಪತಿ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ!

ತಿರುಪತಿ ತಿಮ್ಮಪ್ಪ ಅಂದ್ರೆ ತಟ್ಟನೇ ನೆನಪಾಗೋದು ಅಲ್ಲಿ ಪ್ರಸಾದವಾಗಿ ನೀಡುವ ಲಡ್ಡು (ಲಾಡು). ರುಚಿಕರವಷ್ಟೇ ಅಲ್ಲ ಘಮಘಮಿಸುವ ಸುಗಂಧದಿಂದ ಎಲ್ಲರನ್ನು ಸೆಳೆಯುವ ಲಾಡುವಿನ ಶ್ರೇಯಸ್ಸಿಗೆ ಕರ್ನಾಟಕದ ನಂದಿನಿ ತುಪ್ಪದ ಕೊಡುಗೆ ಅಪಾರ ಇತ್ತು. ಆದ್ರೆ, ಕಳೆದ ಆರು ತಿಂಗಳಿನಿಂದ ಅದ್ಯಾಕೋ ತಿರುಪತಿ ಲಾಡುವಿನ ರುಚಿ, ಸುಗಂಧ ಬಹುತೇಕರಿಗೆ ಸಹ್ಯವಾಗುತ್ತಿಲ್ಲ ಎಂಬ ಆಪಾದನೆ ಇದೆ. ಇದಕ್ಕೆ ಕಾರಣ ನಮ್ಮ ನಂದಿನಿ ತುಪ್ಪದ ಪೂರೈಕೆ ಸ್ಥಗಿತ ಮಾಡಿರೋದು.

ದೇಶದಲ್ಲಿ ನಂದಿನಿ ತುಪ್ಪಕ್ಕಿರುವ ಮಾರುಕಟ್ಟೆ ಬೆಲೆಗಿಂತ ಅರ್ಧಕ್ಕರ್ಧ ಬೆಲೆಗೆ ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ತುಪ್ಪವನ್ನು ಕಳಿಸಲು ಸಾಧ್ಯವಿಲ್ಲ ಎಂದು ಕೆಎಂಎಫ್‌ನಿಂದ ತುಪ್ಪ ಸರಬರಾಜು ಮಾಡಿರಲಿಲ್ಲ. ಆದರೆ, ಕಳೆದ ಎರಡು ಬಾರಿಯಿಂದ ಟಿಟಿಡಿಯ ತುಪ್ಪದ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸಿದರೂ ನಂದಿನಿ ತುಪ್ಪದ ದರ ಹೆಚ್ಚಾಗಿದ್ದು, ಖರೀದಿ ಮಾಡಲು ಸಾಧ್ಯವಿಲ್ಲ ಎಂದು ತಿರುಪತಿ ತಿಮ್ಮಪ್ಪ ದೇವಸ್ಥಾನ ಆಡಳಿತ ಮಂಡಳಿ ತಿರಸ್ಕರಿಸಿದೆ.

ಲಡ್ಡು ಪ್ರಸಾದದಿಂದ ನಂದಿನಿ ಘಮ ಕಾಣೆ

ಈ ಮೂಲಕ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಿಂದ ನಂದಿನಿ ತುಪ್ಪದ ಘಮ ಕಾಣೆಯಾಗಿದೆ. ಟೆಂಡರ್ ನಲ್ಲಿ ಟಿಟಿಡಿ ಕೇಳ್ತಿರೋ ಕಡಿಮೆ ದರಕ್ಕೆ ತುಪ್ಪ ಸರಬರಾಜು ಮಾಡಲ್ಲ ಎಂದು ಕೆಎಂಎಫ್ ಹೇಳಿತ್ತು. ಆದರೆ, ಈ ಬಾರಿ ಕಳೆದ ಬಾರಿಗಿಂತ ಕಡಿಮೆ ದರಕ್ಕೆ ನಂದಿನಿ ತುಪ್ಪವನ್ನು ಸರಬರಾಜು ಮಾಡುವುದಾಗಿ ಕೆಎಂಎಫ್‌ ಟಿಟಿಡಿ ಟೆಂಡರ್‌ನಲ್ಲಿ ಭಾಗವಹಿಸಿದ್ದರೂ ಅದಕ್ಕಿಂತ ಕಡಿಮೆ ದರದ ತುಪ್ಪವನ್ನು ಟಿಟಿಡಿ ಖರೀದಿ ಮಾಡಲು ಮುಂದಾಗಿದೆ. ಆದ್ದರಿಂದ ಕೆಎಂಎಫ್‌ಗೆ ಮತ್ತೆ ಹಿನ್ನಡೆ ಉಂಟಾಗಿದೆ.

ಟಿಟಿಡಿ ದರಕ್ಕೆ ತುಪ್ಪ ಪೂರೈಕೆ ಅಸಾಧ್ಯ

ಈ ಕುರಿತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಪ್ರತಿಕ್ರಿಯಿಸಿದ್ದು, ಕೆಎಂಎಫ್‌ ತುಪ್ಪಕ್ಕೆ ಪ್ರತಿ ಕೆ.ಜಿಗೆ 500 ರೂ. ದರ ನಿಗದಿಪಡಿಸಿ ಟಿಟಿಡಿ ಟೆಂಡರ್‌ನಲ್ಲಿ ತುಪ್ಪಕ್ಕೆ ಬಿಡ್ ಮಾಡಿತ್ತು. ಕಳೆದ ಎರಡು ವಾರದ ಹಿಂದೆ ಬೆಂಗಳೂರು ಕೆಎಂಎಫ್ ಯೂನಿಟ್ ಗೆ ಭೇಟಿ ನೀಡಿದ್ದ ಟಿಟಿಡಿ ತುಪ್ಪ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆದ್ರೆ, ಟಿಟಿಡಿ ಮಾಹಿತಿಯ ಪ್ರಕಾರ ಪ್ರತಿ ಕೆ.ಜಿ. ತುಪ್ಪಕ್ಕೆ ಕೇವಲ 370 ರೂ.ನಂತೆ ತುಪ್ಪ ಸರಬರಾಜು ಮಾಡುವುದಾಗಿ ಖಾಸಗಿ ಕಂಪನಿಯೊಂದು ಟೆಂಡರ್‌ಗೆ ಬಿಡ್‌ ಮಾಡಿತ್ತು. ಇಷ್ಟು ಕಡಿಮೆ ಬಿಡ್ ಮಾಡಿದ್ರೆ ಕೆಎಂಎಫ್‌ಗೆ ಆರ್ಥಿಕ ನಷ್ಟ ಆಗುವ ಭೀತಿಯಿದೆ. ಹೀಗಾಗಿ, ಟಿಟಿಡಿ ನೀಡುತ್ತಿರುವ ರೇಟ್ ಗೆ ತುಪ್ಪ ಪೂರೈಕೆ ಅಸಾಧ್ಯ ಎಂದು ಹೇಳಿದ್ದಾರೆ.

ತುಪ್ಪ ಪೂರೈಕೆಗೆ ಈಗಲೂ ನಾವು ಸಿದ್ದ

ದರದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡರೆ ನಂದಿನಿ ತುಪ್ಪವನ್ನು ತಿರುಪತಿಗೆ ಪೂರೈಸಲಿಕ್ಕೆ ಈಗಲೂ ನಾವು ಸಿದ್ದರಿದ್ದೇವೆ ಎಂದು ಕೆಎಂಎಫ್ ಹೇಳುತ್ತಿದೆ. ಆದ್ರೆ, ಟಿಟಿಡಿ ಮಾತ್ರ ಕಡಿಮೆ ರೇಟ್ ತಪ್ಪಕ್ಕೆ ಮಣೆ ಹಾಕಿರುವುದು ಭಕ್ತರಿಗೂ ರುಚಿಯ ನಿರಾಸೆ ಮೂಡಿಸಿದೆ.

RELATED ARTICLES

Related Articles

TRENDING ARTICLES