ಬೆಂಗಳೂರು : ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ದೋಸ್ತ್ ರೇವಂತ್ ರೆಡ್ಡಿ ಅವರು ತೆಲಂಗಾಣದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 7ರಂದು ನೂತನ ಸಿಎಂ ಆಗಿ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ನಿನ್ನೆ ನೂತನ ಶಾಸಕರ ಸಭೆ ನಡೆಸಿದ್ದ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಿದ್ದರು. ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರೇವಂತ್ ರೆಡ್ಡಿಯವರು ತೆಲಂಗಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ರಾಗಾ ಗೆಲುವಿನ ರೂವಾರಿ
ಡಿಸೆಂಬರ್ 7ರಂದು ರೇವಂತ್ ರೆಡ್ಡಿ, ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ತಮ್ಮ ಆಯ್ಕೆಗೆ ಸಂತಸ ವ್ಯಕ್ತಪಡಿಸಿದ ರೇವಂತ್ ರೆಡ್ಡಿ, ತೆಲಂಗಾಣದಲ್ಲಿ ಕಾಂಗ್ರೆಸ್ 64 ಸ್ಥಾನಗಳ ಭರ್ಜರಿ ಬಹುಮತ ಗಳಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಮುಖ ಕಾರಣಕರ್ತರು. ಅವರ ಭಾರತ್ ಜೋಡೋ ಯಾತ್ರೆಯಿಂದಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ನ ಜನಪ್ರಿಯತೆ ಹೆಚ್ಚಾಯ್ತು. ಹಾಗಾಗಿ ಈ ಗೆಲುವಿನ ರೂವಾರಿ ರಾಹುಲ್ ಗಾಂಧಿ ಎಂದು ಅಭಿಪ್ರಾಯಪಟ್ಟರು.