ಶಿವಮೊಗ್ಗ : ಶಿವಮೊಗ್ಗದ ಆದಿಚುಂಚನಗಿರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದ್ವಿತೀಯ ಪಿಯುಸಿ ಓದುತ್ತಿದ್ದ ಮೇಘಶ್ರೀ (18) ಮೃತ ದುರ್ದೈವಿ. ಈಕೆ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಚೆನ್ನಾಪುರ ಗ್ರಾಮದ ನಿವಾಸಿ ಓಂಕಾರಯ್ಯ ಎಂಬುವರ ಪುತ್ರಿ. ಕಾಲೇಜಿನ ಹಾಸ್ಟೆಲ್ನಲ್ಲಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಇಂದು ಬಯಾಲಾಜಿ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು. ಪರೀಕ್ಷೆ ನಡುವೆ ವಾಶ್ ರೂಂಗೆ ಹೋಗುವುದಾಗಿ ಹೇಳಿ ಮೇಘಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇನ್ನೂ ತಮ್ಮ ಮಗಳ ಸಾವಿಗೆ ಕಾಲೇಜಿನ ಆಡಳಿತ ಮಂಡಳಿ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮೇಘಶ್ರೀ ಸಹಪಾಠಿಗಳು ಕೂಡ ಪ್ರತಿಭಟನೆ ನಡೆಸಿದ್ರು. ಲಕ್ಷಗಟ್ಟಲೇ ಡೊನೇಶನ್ ಹಾಗೂ ಫೀಸ್ ಪಡೆಯುವ ಕಾಲೇಜಿನವರು ವಿದ್ಯಾರ್ಥಿ ಗಳನ್ನು ಶೋಷಣೆ ಮಾಡುತ್ತಿದ್ದಾರೆ. ಸ್ವಲ್ಪ ತಡವಾಗಿ ಬಂದ್ರೂ ಅವಾಚ್ಯವಾಗಿ ಬೈಯುವುದು, ತರಗತಿಯಿಂದ ಹೊರಗೆ ಕಳಿಸುವ ಜೊತೆಗೆ ಹಾಸ್ಟೆಲ್ ನಲ್ಲಿ ಊಟ ಕೊಡುವುದಿಲ್ಲ. ಈ ಬಗ್ಗೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಬೇಜವಬ್ದಾರಿತನ
ಇಷ್ಟೆಲ್ಲಾ ರಂಪಾಟವಾದರೂ ಕೂಡ, ಕಾಲೇಜು ಆಡಳಿತ ಮಂಡಳಿ ಬೇಜವಬ್ದಾರಿತನ ಪ್ರದರ್ಶಿಸಿದ್ದು, ವಿದ್ಯಾರ್ಥಿನಿ ಸಾವಿನ ಬಗ್ಗೆ ಸರಿಯದ ಮಾಹಿತಿ ನೀಡದೇ ಪಲಾಯನವಾದ ಮಾಡಿದೆ. ಸ್ಥಳಕ್ಕೆ ಡಿವೈಎಸ್ಪಿ ಸುರೇಶ್ ಭೇಟಿ ನೀಡಿ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.