ಬೆಂಗಳೂರು : ರಾಮ ಮಂದಿರ ಉದ್ಘಾಟನೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ಸುಮಾರು 2,500 ಸಂತರನ್ನು ಆಹ್ವಾನಿಸಲಾಗುತ್ತಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ಬರದಿಂದ ಸಾಗಿದೆ. ಜನವರಿ 22 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸುವ ಕಾರ್ಯ ಪ್ರಗತಿಯಲ್ಲಿದ್ದು ಸುಮಾರು 7 ಸಾವಿರ ಗಣ್ಯರಿಗೆ ಅತಿಥ್ಯ ವಹಿಸಲು ನಿರ್ಧರಿಸಿದೆ.
ಅತಿಥಿಗಳ ಪಟ್ಟಿ ಅಂತಿಮಗೊಳಿಸಲು ರಾಮ್‌ಕೋಟ್‌ನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಸಲಾಯಿತು. ಅತಿಥಿಗಳ ವಸತಿ, ಸಾರಿಗೆ, ಆಹಾರ ಇತ್ಯಾದಿ ವ್ಯವಸ್ಥೆಗಳ ಕುರಿತು ಚರ್ಚಿಸಲಾಯಿತು. ಅತಿಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಪರಿಗಣಿಸಲಾಗಿದೆ. ಅಯೋಧ್ಯೆಯಿಂದಲೇ ‘ಅತಿಥಿ ದೇವೋ ಭವ’ ಎಂಬ ಸಂದೇಶ ನೀಡಲು ನಿರ್ಧರಿಸಲಾಗಿದೆ.
ದಂಡ, ಛತ್ರ, ಪಾದುಕೆ ತರದಂತೆ ಮನವಿ
7 ಸಾವಿರ ಅತಿಥಿಗಳ ಪೈಕಿ ವಿಶೇಷವಾಗಿ ದೇಶಾದ್ಯಂತ ವಿವಿಧ ಸಂಪ್ರದಾಯಗಳ ಸುಮಾರು 2,500 ಋಷಿಮುನಿಗಳು ಮತ್ತು ಸಂತರನ್ನು ಆಹ್ವಾನಿಸಲಾಗುತ್ತಿದೆ. ಅವರಿಗೆ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತಾ ದೃಷ್ಠಿಯಿಂದಲೂ ಭದ್ರತಾ ಏಜೆನ್ಸಿಗಳ ಜೊತೆಗೆ ಚರ್ಚೆ ಮಾಡಿದೆ. ಭದ್ರತಾ ಏಜೆನ್ಸಿಗಳ ಮನವಿ ಮೇರೆಗೆ ದಂಡ, ಚನ್ವಾರ್, ಛತ್ರ ಮತ್ತು ಪಾದುಕೆಗಳನ್ನು ಸಮಾರಂಭಕ್ಕೆ ತರದಂತೆ ಸಂತರು ಮತ್ತು ಋಷಿಗಳಲ್ಲಿ ಟ್ರಸ್ಟ್ ಮನವಿ ಮಾಡಿದೆ.