ತಮಿಳುನಾಡು : ವರುಣನ ಆರ್ಭಟಕ್ಕೆ ಮಹಾನಗರ ಚೆನ್ನೈ ತತ್ತರಿಸಿದೆ. ಭಾರಿ ಮಳೆಗೆ ಚೆನ್ನೈನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮೈಚುಂಗ್ ಚಂಡಮಾರುತದ ಆರ್ಭಟದಿಂದ ಜನ ತತ್ತರಿಸಿದ್ದಾರೆ.
ಇಲ್ಲಿನ ರಸ್ತೆಗಳು ಜಲಾವೃತ ಆಗಿದ್ದು, ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದೆ. ಪಾಂಡಿಚೇರಿ, ಕಾರೈಕಲ್, ಯಾನಂನಲ್ಲಿ ಮಳೆ ಅಬ್ಬರ ಜೋರಾಗಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನ 4 ಜಿಲ್ಲೆಗಳ ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.
ಚೆನ್ನೈನಾದ್ಯಂತ ಮೆಟ್ರೋ ನಿಲ್ದಾಣಗಳು ಜಲಾವೃತ ಆಗಿದೆ. ಸೇಂಟ್ ಥಾಮಸ್ ಮೆಟ್ರೋ ನಿಲ್ದಾಣದಲ್ಲಿ 4 ಅಡಿ ನೀರು ತುಂಬಿದ್ದರಿಂದ ಮೆಟ್ರೋ ನಿಲ್ದಾಣ ಪ್ರವೇಶಕ್ಕೆ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಬೆಂಗಳೂರು-ಚೆನ್ನೈ ಮಾರ್ಗದ 11 ರೈಲು ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ತಗ್ಗು ಪ್ರದೇಶ ಜಲಾವೃತ
ತಮಿಳುನಾಡಿನಲ್ಲಿ ಮೈಚುಂಗ್ ಚಂಡಮಾರುತದ ಅಬ್ಬರಕ್ಕೆ ಭಾರೀ ಮಳೆಯಾಗಿದ್ದು, ಚೆನ್ನೈನ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಚೆನ್ನೈನ ವ್ಯಾಸರಪಾಡಿಯ ಅರುಂತ ಥಿಯಾರ್ ನ 16 ಬೀದಿಗಳು ಜಲಾವೃತಗೊಂಡಿವೆ. ಹಲವು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ಸಿಲುಕಿರುವ ನಿವಾಸಿಗಳು ಪರದಾಡುವಂತಾಗಿದೆ. ಇನ್ನೂ ಚೆನ್ನೈ ಏರ್ಪೋರ್ಟ್ ರನ್ ವೇ ಕೂಡ ಜಲಾವೃತವಾಗಿದ್ದು, ಗಂಟೆಗೆ 310 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Stay safe to all those living in cyclone hit areas… Especially Chennai and Vishakhapatnam residents 🙏#CycloneMichuang pic.twitter.com/WgBIYuWF4j
— Niranjan (@axxon_ix) December 4, 2023