ಹಾಸನ : ಪ್ರಧಾನಿ ನರೇಂದ್ರ ಮೋದಿಯವರು ವೈಯುಕ್ತಿಕವಾಗಿ ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮನ್ನು ಅವರ ಜೊತೆ ಸ್ವಾಗತಿಸಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಕರ್ನಾಟಕದಲ್ಲಿ ಮೋದಿ, ಅಮಿತ್ ಶಾ ಜೊತೆ ಕೈ ಜೋಡಿಸಿ, ಕಾಂಗ್ರೆಸ್ ವಿರುದ್ಧ ಹೋರಾಡುವುದರಲ್ಲಿ ಯಾವ ಮುಚ್ಚುಮರೆ ಇಲ್ಲ ಎಂದು ತಿಳಿಸಿದರು.
ಫಲಿತಾಂಶ ಬಂತು ಎಂಬ ಕಾರಣಕ್ಕೆ ನಾನು ಹೇಳುತ್ತಿಲ್ಲ. 2018ರಿಂದ ಆದ ಬೆಳವಣಿಗೆ ಮೇಲೆ ನಾನು ಹೇಳುತ್ತಿದ್ದೇನೆ. ಈ ಸಂದರ್ಭ ನಮ್ಮ ಪಕ್ಷ ಉಳಿಯಬೇಕು, ಜೆಡಿಎಸ್ ಉಳಿಯಬೇಕು. ಜನತಾ ಪರಿವಾರ ಪ್ರಾರಂಭವಾದಾಗಿನಿಂದ ಈ ಪಕ್ಷ ಉಳಿಸಿಕೊಂಡು ಬಂದಿದ್ದೇನೆ. ಅಂದಿನಿಂದಲೂ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿ ಪಕ್ಷ ಕಟ್ಟಿದ್ದೇನೆ. ಮುಸ್ಲಿಂ, ಮಹಿಳೆ, ನಾಯಕ ಎಲ್ಲರಿಗೂ ಮೀಸಲಾತಿ ನೀಡಿದ್ದೇವೆ ಎಂದು ಹೇಳಿದರು.
ಮೊನ್ನೆ ನಾನು ಸಮೀಕ್ಷೆಗಳ ಬಗ್ಗೆ ಮಾತನಾಡಿದ್ದೆ
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದಿದೆ. ಮೊನ್ನೆ ನಾನು ಸಮೀಕ್ಷೆಗಳ ಬಗ್ಗೆ ಮಾತನಾಡಿದ್ದೆ. ಎನ್‌ಡಿಎ ಪರ್ಯಾಯವಾಗಿ I.N.D.I.A ಅನ್ನ 46 ಪ್ರದೇಶಿಕ ಪಕ್ಷಗಳು ಸೇರಿ ಮಾಡಿಕೊಂಡಿವೆ. ದೇಶವನ್ನಾಳಿದ ಕಾಂಗ್ರೆಸ್ ನೇತೃತ್ವದಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ನಮ್ಮ ಪಕ್ಷ ಜೆಡಿಎಸ್ ನಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಬಿಜೆಪಿಯನ್ನ ಹೊರತುಪಡಿಸಿ ಎಲ್ಲಾ ಸೆಕ್ಯುಲರ್ ಪಾರ್ಟಿಯವರೂ ಕರ್ನಾಟಕದಲ್ಲಿ ಭಾಗಿಯಾಗಿದ್ರು. ಆದ್ರೆ, ಈಗ ನಮ್ಮನ್ನ ಹೊರಗಿಡಲೇಬೇಕು ಎಂದು ತೀರ್ಮಾನ ಮಾಡಿದ್ದು ಯಾರು? ಎಂದು ಗುಡುಗಿದರು.
ನಮ್ಮನ್ನ ಹೊರ ದೂಡಿದ್ದು ಕಾಂಗ್ರೆಸ್
ಕುಮಾರಸ್ವಾಮಿ ಸರ್ಕಾರ ತೆಗೆಯಲು ಕಾರಣ ಯಾರು? ಯಾರು ನಮ್ಮನ್ನ ಹೊರಗಿಡಲು ತೀರ್ಮಾನ ಮಾಡಿದರೋ ಅವರೆ ಹೊರಗಿಟ್ಟಿದ್ದಾರೆ. ನಿತೀಶ್ ಕುಮಾರ್ ಅವರು ಜೆಡಿಎಸ್ ಈ ಸಂಘಟನೆ ಸೇರಿದರೆ ನಾವು ಹೊರಗಿರ್ತೇವೆ ಎಂದರು. ಆ ಸಂದರ್ಭ ಮೋದಿ ಮತ್ತು ಶಾ ನಮ್ಮನ್ನ ಸ್ವಾಗತ ಮಾಡಿದ್ದಾರೆ. ನಮ್ಮನ್ನ ಹೊರ ದೂಡಿದ್ದು ಕಾಂಗ್ರೆಸ್. ಜೆಡಿಎಸ್ ಲೆಕ್ಕಕ್ಕಿಲ್ಲ, ಆಟಕ್ಕಿಲ್ಲ ಕೆಲಸ ದಿನಗಳಲ್ಲಿ ಜೆಡಿಎಸ್ ಇರೋದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಲಘುವಾಗಿ ಮಾತನಾಡಿದರು ಎಂದು ಹೆಚ್.ಡಿ. ದೇವೇಗೌಡ ಕಿಡಿಕಾರಿದರು.