Friday, September 20, 2024

ವಿಕಲಚೇತನರ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿ: ಅಮರೇಶ್ ಹೆಚ್

ಬೆಂಗಳೂರು ಗ್ರಾಮಾಂತರ: ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಎಲ್ಲರಲ್ಲೂ ಒಂದಲ್ಲ ಒಂದು ನ್ಯೂನತೆ ಇರುತ್ತದೆ. ವಿಶೇಷಚೇತನರಲ್ಲಿ ವಿಶೇಷ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸಿ ಪೋಷಿಸಿದರೆ ಸಾಧನೆ ಮಾಡಬಹುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆಯ ಸಮಿತಿ ಅಧ್ಯಕ್ಷರಾದ ಅಮರೇಶ್.ಹೆಚ್ ಅವರು ಹೇಳಿದರು.

ಬೆಂ. ಗ್ರಾ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ‌ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ‌ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯೂನತೆಗಳನ್ನು ಸಕಾಲದಲ್ಲಿ ಗುರುತಿಸಿದರೆ ಗುಣಪಡಿಸುವ ಸಾಧ್ಯತೆಯಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಕಲಚೇತನರ ಕುಂದು ಕೊರತೆ ಸಭೆಗಳನ್ನು ನಡೆಸಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ಅವರ ದೂರು ಮತ್ತು ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕ್ರಮವಹಿಸಲಾಗುತ್ತಿದೆ.

ಸರ್ಕಾರಿ ಸೌಲಭ್ಯಗಳ ಬಗ್ಗೆ ವಿಕಲಚೇತನರಿಗೆ ಮಾಹಿತಿ ಕೊರತೆ ಇದೆ, ಅವರಿಗೆ ಸಂಪೂರ್ಣ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕಕರು ಶ್ರಮಿಸಬೇಕು ಎಂದು ಅವರು ಹೇಳಿದರು. ವಿಕಲಚೇತನರ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದಿಸಿದರು.

ಇದನ್ನೂ ಓದಿ: ವಿಕಲಚೇತನರು ಸಮಾಜಕ್ಕೆ ಹೊರೆ ಅಲ್ಲ: ಸಿಎಂ ಸಿದ್ದರಾಮಯ್ಯ!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅನಿತಾಲಕ್ಷ್ಮೀ ಮಾತನಾಡಿ
ವಿಕಲಚೇತನರಲ್ಲಿ ಉತ್ಸಾಹವಿದೆ. ವಿಕಲಚೇತನರನ್ನು ಸಮಾಜದ ಮುನ್ನೆಲೆಗೆ ತರುವ ಉದ್ದೇಶದಿಂದ ವಿಕಲಚೇತನರ ದಿನಾಚರಣೆ ಆರಂಭಿಸಲಾಯಿತು. ದೇಶದ ಅಭಿವೃದ್ಧಿಗೆ ವಿಕಲಚೇತನರ ಕೊಡುಗೆ ಇದೆ. ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ವಿಕಲಚೇತನರು ಸಾಧನೆ ಮಾಡುತ್ತಿದ್ದಾರೆ ಎಲ್ಲರೂ ಕೂಡ ತಮ್ಮ ವೈಫಲ್ಯ ಮರೆತು ನಿರಂತರ ಶ್ರಮದಿಂದ ಯಶಸ್ಸು ಗಳಿಸಿಕೊಳ್ಳಬಹುದೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆ/ವ್ಯಕ್ತಿಗಳನ್ನು ಅಭಿನಂದಿಸಲಾಯಿತು. ತಾಲ್ಲೂಕು ಮಟ್ಟದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿಕಲಚೇತನರಿಗೆ ಪ್ರಥಮ, ದ್ವಿತೀಯ, ತೃತೀಯ, ಬಹುಮಾನ ವಿತರಿಸಲಾಯಿತು.

ವಿಕಲಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ ಹಾಗೂ ಕಾಯ್ದೆ ಕಾನೂನುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅರಿವು ಮೂಡಿಸಲಾಯಿತು. ಆರೋಗ್ಯ ಇಲಾಖೆ ವತಿಯಿಂದ ವಿಕಲಚೇತನರಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣಮೂರ್ತಿ, ದೇವನಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜಿ.ಕೆ ನಾರಾಯಣ ಸ್ವಾಮಿ, ಹಿರಿಯ ತಜ್ಞೆ ಡಾ.ಗಾಯತ್ರಿ, ದೇವನಹಳ್ಳಿ ತಾಲ್ಲೂಕು ವಿಕಲಚೇತನರ ಅಧ್ಯಕ್ಷರಾದ ಸುರೇಶ್, ಆಲೂರು ದುದ್ದನಹಳ್ಳಿ ಅಧ್ಯಕ್ಷರಾದ ಜಯಲಕ್ಷ್ಮಮ್ಮ ಸೇರಿದಂತೆ ಜಿಲ್ಲೆಯ ಎಲ್ಲಾ ವಿಕಲಚೇತನರು ಪ್ರಗತಿಪರ ಸಂಘಟನೆಗಳು, ಎಲ್ಲಾ ವಿವಿಧೋದ್ದೇಶ/ನಗರ/ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ತಾಲ್ಲೂಕು ಮಟ್ಟದ ವಿಕಲಚೇತನರ ನೋಡಲ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES