Sunday, January 5, 2025

ಚಾಮುಂಡಿ ಬೆಟ್ಟದ ನಂದಿಗೆ ದ್ರವ್ಯ, ಗಂಧ, ಕ್ಷೀರದಿಂದ ಮಸ್ತಕಾಭಿಷೇಕ

ಮೈಸೂರು : ಚಾಮುಂಡಿಬೆಟ್ಟದ ಬೃಹತ್ ನಂದಿಗೆ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಧದ ದ್ರವ್ಯ, ಫಲ, ಪತ್ರೆ, ಪುಷ್ಪಾದಿ ಸೇರಿ 32 ರೀತಿಯಲ್ಲಿ ಮಹಾ ಮಸ್ತಕಾಭಿಷೇಕ ನೆರವೇರಿತು.

ಮೈಸೂರಿನ ಚಾಮುಂಡಿಬೆಟ್ಟ ಎಂದರೆ ಥಟ್ಟನೆ ನೆನಪಾಗುವುದು ತಾಯಿ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಬೃಹತ್ ನಂದಿ ವಿಗ್ರಹ. ಚಾಮುಂಡಿ ದರ್ಶನ ಪಡೆದವರು ನಂದಿ ನೋಡದೇ ಬರಲಾರರು. ಈ ನಂದಿಗೆ ಪ್ರತಿ ವರ್ಷ ಮಹಾಮಸ್ತಕಾಭಿಷೇಕ ನಡೆಸಲಾಗುತ್ತಿದೆ. ಇಂದೂ ಕೂಡ ಭಕ್ತರು ಭಕ್ತಿ ಭಾವದಿಂದ ನಂದಿಗೆ ಮಹಾ ಮಸ್ತಕಾಭಿಷೇಕ ನೆರವೇರಿಸಿದರು.

ಅರಿಸಿನ ಕುಂಕುಮದ ಅಭಿಷೇಕ, ಗಂಧ ಕ್ಷೀರದ ಜೊತೆ ವಿವಿಧ ದ್ರವ್ಯಗಳ ಮಜ್ಜನ. ಮೈಸೂರಿನ ಚಾಮುಂಡಿಬೆಟ್ಟದ ನಂದಿಗೆ ಇಂದು ಮಹಾ ಮಸ್ತಕಾಭೀಷೇಕದ ಸಂಭ್ರಮ. ಚಾಮುಂಡಿಬೆಟ್ಟಕ್ಕೆ ಸಾವಿರ ಮೆಟ್ಟಿಲಿವೆ. ಈ ಮೆಟ್ಟಲು ಹತ್ತಿ ಹೋಗುವಾಗ ಮಧ್ಯ ಬೆಟ್ಟದಲ್ಲಿ ಬೃಹತ್ ಕಲ್ಲಿಂದ ಕೆತ್ತಿರುವ ನಂದಿ ವಿಗ್ರಹ ಎಲ್ಲರನ್ನು ಸೆಳೆಯುತ್ತದೆ. ಆ ಬೃಹತ್ ನಂದಿಗೆ ಇಂದು ಮಹಾ ಮಜ್ಜನ ಮಾಡಿಸಲಾಯ್ತು. ಈ ಮಹಾ ಮಸ್ತಕಾಭೀಷೇಕಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದೆ ಮೈಸೂರು ರಾಜರು ಮಸ್ತಕಾಭಿಷೇಕ ನಡೆಸುತ್ತಿದ್ದರು. ಈಗ ಸಾರ್ವಜನಿಕರು ಇದನ್ನು ನೆರವೇರಿಸುತ್ತಿದ್ದಾರೆ.

32 ರೀತಿಯಲ್ಲಿ ನಂದಿಗೆ ಅಭಿಷೇಕ

ಬೆಳಗ್ಗೆ 8 ಗಂಟೆಗೆ ನಂದಿಗೆ ಮಹಾಭಿಷೇಕ ಆರಂಭಿಸಲಾಯಿತು. ಹಾಲು, ಮೊಸರು, ಜೇನುತುಪ್ಪ, ಎಳನೀರು, ಚಂದನ, ಅರಿಶಿನ, ಕುಂಕುಮ ಸೇರಿದಂತೆ 32 ರೀತಿಯಲ್ಲಿ ನಂದಿಗೆ ಅಭಿಷೇಕ ಮಾಡಲಾಯಿತು. ನೂರಾರು ಭಕ್ತರು ಮಹಾಭಿಷೇಕದಲ್ಲಿ ಭಾಗಿಯಾಗಿದ್ದರು. ಪ್ರತಿ ದಿನ ಬೆಟ್ಟ ಹತ್ತಿ ಇಳಿಯುವವರು ರಚಿಸಿಕೊಂಡಿರುವ ಬೆಟ್ಟದ ಬಳಗದ ಸದಸ್ಯರಿಂದ ಈ ಕಾರ್ಯಕ್ರಮ ನಡೆಸಲಾಯಿತು. ಚಾಮುಂಡಿ ಭಕ್ತರು ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು.

25 ಅಡಿ ಉದ್ದ, 16 ಅಡಿ ಎತ್ತರದ ವಿಗ್ರಹ

25 ಅಡಿ ಉದ್ದ ಹಾಗೂ 16 ಅಡಿ ಎತ್ತರವಿರುವ ಈ ನಂದಿ ವಿಗ್ರಹವನ್ನು 1659ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಅರಸರಾಗಿದ್ದ ದೊಡ್ಡದೇವರಾಜ ಒಡೆಯರ್ ನಿರ್ಮಿಸಿದ್ದರು. ಅಂದಿನಿಂದ ಇಂದಿನವರೆಗೂ ಈ ನಂದಿ ಅದೇ ಆಕರ್ಷಣೆ ಉಳಿಸಿಕೊಂಡು ಬರುತ್ತಿರುವುದು ವಿಶೇಷ.

RELATED ARTICLES

Related Articles

TRENDING ARTICLES