ಬೆಂಗಳೂರು : ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಭಾನುವಾರ) ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.
ಮಿಜೋರಾಂ ಮತ ಎಣಿಕೆ ಮಾತ್ರ ಸೋಮವಾರ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ. ಇವಿಎಂಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳಿಗೆ ಬಿಗಿ ಭದ್ರತೆಯನ್ನು ಒದಸಲಾಗಿದೆ. ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ. ಮಧ್ಯಾಹ್ನದ ವೇಳೆಗೆ ನಾಲ್ಕೂ ರಾಜ್ಯಗಳ ಫಲಿತಾಂಶದ ಸಂಪೂರ್ಣ ಚಿತ್ರಣ ಸಿಗಲಿದೆ.
ಪಂಚ ರಾಜ್ಯಗಳ ಫಲಿತಾಂಶವನ್ನ 2024ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎನ್ನಲಾಗ್ತಿದೆ. ಹೀಗಾಗಿ, ಬಿಜೆಪಿ ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಮತ್ತು ಮಧ್ಯಪ್ರದೇಶವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷವು ಎಲ್ಲಾ 5 ರಾಜ್ಯಗಳನ್ನು ಗೆದ್ದು ಹೊಸ ಇತಿಹಾಸ ಬರೆಯಲು ನೋಡುತ್ತಿದೆ.
ಮಧ್ಯಪ್ರದೇಶಕ್ಕೆ ಯಾರಾಗ್ತಾರೆ ಮಹಾರಾಜ?
230 ಸ್ಥಾನಗಳನ್ನ ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಯಾರಿಗೆ ಒಲಿಯುತ್ತೆ ಅನ್ನೋದು ಕುತೂಹಲ ಹೆಚ್ಚಾಗಿದೆ. ಯಾಕೆಂದ್ರೆ, ಸಮೀಕ್ಷೆಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೆಕ್ ಟು ನೆಕ್ ಫೈಟ್ ಇದೆ. ಆದ್ರೆ, ಅಂತಿಮವಾಗಿ ಮತದಾರರ ಪ್ರಭುಗಳು ಯಾರಿಗೆ ಮಣೆ ಹಾಕ್ತಾರೆ ಅನ್ನೋದು ಫಲಿತಾಂಶದ ಬಳಿಕವೇ ತಿಳಿಯಲಿದೆ.
ರಾಜಸ್ಥಾನದಲ್ಲಿ ಅರಳುತ್ತಾ ಕಮಲ?
ಸಮೀಕ್ಷೆಗಳ ಪ್ರಕಾರ ಮರುಭೂಮಿ ನಾಡು ರಾಜಸ್ಥಾನದಲ್ಲಿ ಕಮಲ ಅರಳುವ ಮುನ್ಸೂಚನೆ ಸಿಕ್ಕಿದೆ. ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿಗೆ ಅಲ್ಪ ಮುನ್ನಡೆ ನೀಡಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ಆಗಿದೆ. ಒಂದು ವೇಳೆ ಬಿಜೆಪಿ ಬಹುಮತ ಪಡೆದ್ರೆ, ಹಾಲಿ ಸಿಎಂ ಅಶೋಕ್ ಗೆಹ್ಲೋಟ್ಗೆ ಮುಖಭಂಗ ಆಗಲಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಅಧಿಕಾರನಾ?
ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್ಗೆ ಅಧಿಕಾರ ಸಿಗುವ ಮುನ್ಸೂಚನೆ ಸಿಕ್ಕಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಕರ್ನಾಟಕದ ಗ್ಯಾರಂಟಿ ಮಾಡೆಲ್ ವರ್ಕೌಟ್ ಆದಂತೆ ಆಗುತ್ತೆ. ಈ ಮೂಲಕ 3ನೇ ಬಾರಿ ಸಿಎಂ ಆಗುವ ಕನಸು ಕೆ. ಚಂದ್ರಶೇಖರ್ ರಾವ್ ಕನಸು ಭಗ್ನವಾಗಲಿದೆ.
ಛತ್ತೀಸ್‌ಗಢದಲ್ಲಿ ಗೆದ್ದು ಬೀಗುತ್ತಾ ಕಾಂಗ್ರೆಸ್?
ಸಮೀಕ್ಷೆಗಳ ಪ್ರಕಾರ ಛತ್ತೀಸ್ಗಢ ಅಖಾಡದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟರೂ, ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ. ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿಯನ್ನ ಕೈಪಡೆ ಹಿಂದಿಕ್ಕಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ಗೆದ್ದು ಬೀಗುವ ಸಾಧ್ಯತೆ ಇದೆ. ಇನ್ನೂ, ಮಿಜೋರಾಂನಲ್ಲಿ ಡಿಸೆಂಬರ್ 4 ರಂದು ಮತ ಎಣಿಕೆ ನಡೆಯಲಿದೆ.