ಹುಬ್ಬಳ್ಳಿ: ಎರಡು ಲಕ್ಷ ರೂಪಾಯಿ ಮೌಲ್ಯದ ನಾಯಿಮರಿ ಕೊಡಿಸಿಲ್ಲ ಎಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಮಿಷನ್ ಕಾಂಪೌಂಡ್‌ನಲ್ಲಿ ನಡೆದಿದೆ.
ಅಲೆನ್ ಭಸ್ಮೆ (24) ಆತ್ಮಹತ್ಯೆಗೆ ಶರಣಾದ ಯುವಕ. ತಾನು ಆಸೆಪಟ್ಟ ನಾಯಿಮರಿಯನ್ನು ಅಮ್ಮ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣದಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಅಲೆನ್ ಎರಡು ಲಕ್ಷ ಮೌಲ್ಯದ ನಾಯಿಮರಿ ಕೊಡಿಸುವಂತೆ ತಾಯಿಯ ಬಳಿ ಹಠ ಮಾಡುತ್ತಿದ್ದ. ಆದರೆ, ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ತಾಯಿ ನಾಯಿ ಕೊಡಿಸಲು ಆಗುವುದಿಲ್ಲ ಎಂದು ಹೇಳಿದ್ದರು. ಆದರೂ ತನಗೆ ನಾಯಿ ಬೇಕೇ ಬೇಕು ಎಂದು ಅಲೆನ್ ಪಟ್ಟು ಹಿಡಿದಿದ್ದ.
ಮಗನ ಕಾಟಕ್ಕೆ ಮನೆ ಬಿಟ್ಟಿದ್ದ ತಾಯಿ
ಮಗನ ಕಾಟ ತಾಳಲಾರದೆ ತಾಯಿ ಮನೆಯನ್ನೇ ಬಿಟ್ಟು ಹೋಗಿದ್ದರು. ತನ್ನಿಂದ ತಾಯಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದ ಅಲೆನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.