ಕೊಪ್ಪಳ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ವಪಕ್ಷೀಯ ಮಾಜಿ MLC ಹೆಚ್.ಆರ್. ಶ್ರೀನಾಥ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಯಾವತ್ತೂ ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿದವರಲ್ಲ ಎಂದು ಕುಟುಕಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಮಾಡೋ ವ್ಯಕ್ತಿ ಸಿದ್ದರಾಮಯ್ಯ. ಮೊದಲು ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಯಕರ್ತರನ್ನ ಬೆಳೆಸುವುದೇ ಕಾಂಗ್ರೆಸ್ ಪಕ್ಷದ ಸಿದ್ದಾಂತ. ಕಾರ್ಯಕರ್ತರು ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷವೇ ಇಲ್ಲ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮಾಡಿರೋ ಪಟ್ಟಿಯನ್ನು ತಕ್ಷಣವೇ ತಡೆಹಿಡಿಯಬೇಕು. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ, ಮಧ್ಯಸ್ಥಿಕೆ ವಹಿಸಿ ನಿಗಮ, ಮಂಡಳಿ ಘೋಷಣೆ ಮಾಡಬೇಕು. ಶಾಸಕರಿಗೆ ನಿಗಮ, ಮಂಡಳಿ ಕೊಡಬೇಕು ಅನ್ನೋದು ಘೋಷಣೆ ಆಯ್ತು ಅಂದ್ರೆ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಈ ಶಾಸಕರಿಗೆ ‘ನಿಗಮ’ ಸ್ಥಾನವಿಲ್ಲ
ನಿಗಮ-ಮಂಡಳಿ ನೇಮಕ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎಲ್ಲರೂ ಚರ್ಚೆ ಮಾಡಿ ಪಟ್ಟಿ ಅಂತಿಮ ಮಾಡಿದ್ದೇವೆ. ಸುರ್ಜೇವಾಲಾ ಹೈಕಮಾಂಡ್ ಬಳಿ ಪಟ್ಟಿಯನ್ನ ತೆಗೆದುಕೊಂಡು ಹೋಗಿದ್ದಾರೆ. ಮೊದಲ ಬಾರಿ ಶಾಸಕರಾದವರಿಗೆ ನಿಗಮ-ಮಂಡಳಿ ಸ್ಥಾನ ಇಲ್ಲ ಎಂದು ತಿಳಿಸಿದ್ದಾರೆ.