ಬೆಂಗಳೂರು: ಬಿಗ್‌ಬಾಸ್ ಈ ಸಲದ ಶೋ50ನೇ ದಿನವನ್ನು ತಲುಪಿದೆ. ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಆದರೂ ಕೂಡ ನೀತುವನಜಾಕ್ಷಿ ಮನೆಯಿಂದ ಹೊರ ಬಂದಿದ್ದಾರೆ.
ಇನ್ನೂ ಹೊರಹೋಗುವ ಮುನ್ನ ಅವರು ಅವರ ಕ್ಯಾಪ್ಟನ್‌ನ ಜವಾಬ್ದಾರಿಯನ್ನು ಒಬ್ಬರನ್ನು ನೇಮಿಸುವಂತೆ ಬಿಗ್‌ಬಾಸ್ ಆದೇಶಿಸಿದ್ದಾರೆ. ಅದಕ್ಕೆ ನೀತು ಮೈಕಲ್ ಅವರನ್ನು ನಾಯಕನನ್ನಾಗಿ ನೆಪಿಸಿ ಹೊರಬಿದ್ದಿದ್ದಾರೆ. ಈ ವಾರದ ಕ್ಯಾಪ್ಟನ್ ಆಗಿ ಮೈಕಲ್ ಮುಂದುವರಿಯಲಿದ್ದಾರೆ.
50ನೇ ದಿನವನ್ನು ತಲುಪಿದ ಸ್ಪರ್ಧಿಗಳು ಈ ವಾರದ ‘ಸೂಪರ್ ಸಂಡೆ ವಿಥ್ ಸುದೀಪ್’ ಎಪಿಸೋಡ್‌ನಲ್ಲಿ ಐವತ್ತು ದಿನಗಳ ಪಯಣದ ವಿಟಿಯನ್ನೂ ಹಾಕಿ ತೋರಿಸಲಾಗಿದೆ. ಐವತ್ತು ದಿನಗಳ ಕಾಲದ ಏಳುಬೀಳಿನ ಹಾದಿಯನ್ನು ನೋಡಿ ಸ್ಪರ್ಧಿಗಳು ಖುಷಿಪಟ್ಟರು.
ನಾಮಿನೇಷನ್ ಲೀಸ್ಟ್‌ನಲ್ಲಿ ಇರುವವರು ಸೇವ್ ಆಗಿದ್ದು ಹೇಗೆ..?
ನಾಮಿನೇಷನ್ ಲೀಸ್ಟ್‌ನಲ್ಲಿರುವ ಸ್ಪರ್ಧಿಗಳಲ್ಲಿ ಮೊದಲು ನಮ್ರತಾ ಅವರು ಸೇಫ್ ಎಂದು ಕಿಚ್ಚ ಘೋಷಣೆ ಮಾಡಿದರು. ನಂತರ ಸೇಫ್ ಆಗಿದ್ದು, ತುಕಾಲಿ ಸಂತೋಷ್. ಸ್ನೇಹಿತ್ ಕೂಡ ಸೇಫ್ ಆದರು. ಆ ಹಂತದಲ್ಲಿ ನಾಮಿನೇಷನ್ ಲೀಸ್ಟ್‌ನಲ್ಲಿ ಉಳಿದವರು ನೀತು ಮತ್ತು ಸಿರಿ. ಅವರಿಬ್ಬರಲ್ಲಿ ಸಿರಿ ಸೇಫ್ ಆಗಿದ್ದಾರೆ ಮತ್ತು ನೀತು ವನಜಾಕ್ಷಿ ಅವರ ಬಿಗ್‌ಬಾಸ್ ಪಯಣ ಈ ಎಪಿಸೋಡ್‌ನೊಂದಿಗೆ ಮುಗಿದಿದೆ. ಬಿಗ್‌ಬಾಸ್ ಕನ್ನಡ ಇತಿಹಾಸದಲ್ಲಿಯೇ, ಕ್ಯಾಪ್ಟನ್‌ಷಿಪ್‌ನಲ್ಲಿ ಇದ್ದು, ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿ ನೀತು ಹೊರಗೆ ಹೋಗಿದ್ದಾರೆ.
ಟ್ರಾನ್ಸ್‌ಜೆಂಡರ್ ಸಮುದಾಯದಿಂದ ಬಂದಿದ್ದ ನೀತು
ಟ್ರಾನ್ಸ್‌ಜೆಂಡರ್ ಸಮುದಾಯದಿಂದ ಬಂದಿರುವ ನೀತು, ‘ನಮ್ಮ ಸಮುದಾಯದವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಬಿಗ್‌ಬಾಸ್ ವೇದಿಕೆಯ ಮೂಲಕ ಮಾಡುತ್ತೇನೆ’ ಎಂದು ಆರಂಭದಲ್ಲಿಯೇ ಹೇಳಿದ್ದರು. ಹಾಗೆಂದು ಮನೆಯೊಳಗೆ ಹೋದಾಗ ಮೊದಲ ಕೆಲವು ದಿನಗಳನ್ನು ಬಿಟ್ಟರೆ ತಮ್ಮ ಸಮುದಾಯದವರ ಬಗ್ಗೆ ಅವರು ಮಾತನಾಡಿದ್ದು ಕಡಿಮೆಯೇ. ಆದರೆ ಅವರು ಎಲ್ಲರೊಂದಿಗೆ ಬೆರೆಯುವ ರೀತಿ, ಗುಂಪಿನಲ್ಲಿದ್ದರೂ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ, ಗಟ್ಟಿಯಾದ ಧ್ವನಿಯಲ್ಲಿ ಹೇಳುವ ಬಗೆ, ಟಾಸ್ಕ್‌ಗಳಲ್ಲಿ ಮುಂದೆ ಬಂದು ಭಾಗವಹಿಸುವುದು ಇವೆಲ್ಲವೂ ಟ್ರಾನ್ಸ್‌ಜೆಂಡರ್ ಸಮುದಾಯದವರ ಬಗ್ಗೆ ಒಂದು ಸಕಾರಾತ್ಮಕ ಧೋರಣೆಯನ್ನು ಬೆಳೆಸಿದ್ದಂತೂ ನಿಜ.
ಈಗ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಹೊರಹೋಗುವ ಮೊದಲು ಅವರು ತಮ್ಮ ಬದುಕಿನ ಬಗ್ಗೆ, ಬಿಗ್‌ಬಾಸ್ ಮನೆಯಿಂದ ತಮ್ಮ ಬದುಕಿನಲ್ಲಾದ ಬದಲಾವಣೆಯ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಕನ್ವರ್ಟ್ ಆಗುವ ಮೊದಲು ನನ್ನ ಬದುಕು ನರಕವೇ ಆಗಿತ್ತು. ಹೆಣ್ಣಾಗಿ ಫೀಲ್ ಮಾಡ್ತಿದ್ದೆ. ಹೊರಗಡೆ ಹುಡುಗನಾಗಿ ಹುಡುಗನಾಗಿ ಕಾಣಿಸ್ತಿದ್ದೆ. ಅದು ನಾನು ಅನಿಸ್ತಿರ್ಲಿಲ್ಲ. ಯಾವಾಗ ನನ್ನ ತಾಯಿ ನನ್ನನ್ನು ಒಪ್ಪಿಕೊಂಡ್ರೋ ಆಗ ನನ್ನ ಹೊಸ ಜೀವನ ಶುರುವಾಯ್ತು. ಈಗ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡ್ತಿದ್ದೀನಿ. ಇಲ್ಲಿಯೂ ಪ್ರತಿಕ್ಷಣ ಎಂಜಾಯ್ ಮಾಡ್ತಿದ್ದೀನಿ. ಎಲ್ಲರಿಂದಲೂ ಪ್ರೀತಿ ಸಿಕ್ಕಿದೆ’ ಎಂದು ನೀತು ಐವತ್ತು ದಿನಗಳ ಜರ್ನಿಯ ಕುರಿತು ಹೇಳಿದರು.
ಎಲಿಮಿನೇಟ್ ಆಗುತ್ತಿದ್ದೀರಾ ಎಂದು ಘೋಷಣೆಯಾಗುತ್ತಿದ್ದ ಹಾಗೆಯೇ ನೀತು ಮುಖದಲ್ಲಿ ವಿಷಾದ ಕಾಣಿಸಿಕೊಂಡಿತು.
‘ಟ್ರಾನ್ಸ್‌ಜೆಂಡರ್ ಆಗಿರುವ ನನಗೆ ವೇದಿಕೆ ಕೊಟ್ಟಿರುವುದಕ್ಕೆ ಧನ್ಯವಾದ. ಎಲ್ಲರ ಪ್ರೀತಿ ನನಗೆ ನೂರಕ್ಕೆ ನೂರು ಸಿಕ್ಕಿದೆ. ಆ ಪ್ರೀತಿಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಖಷಿಯಿದೆ. ಎಲ್ಲರಿಂದಲೂ ಒಂದೊಂದು ವಿಷಯ ಕಲಿತಿದ್ದೀನಿ. ಅವೆಲ್ಲವನ್ನೂ ನಾನು ನನ್ನ ಬದುಕಿನಲ್ಲಿ ಕಲಿತುಕೊಂಡು ಒಳ್ಳೆಯ ಮನುಷ್ಯನಾಗ್ತೀನಿ. ಇಲ್ಲಿನ ಒಂದೊಂದು ಕ್ಷಣವನ್ನೂ ನಾನು ಸೆಲಬ್ರೇಟ್ ಮಾಡಿದ್ದೀನಿ’ ಎಂದು ನೀತು ಮನೆಯಿಂದ ಹೊರಬಿದ್ದಿದ್ದಾರೆ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು.