ಬೆಂಗಳೂರು : ನ್ಯುಮೋನಿಯಾ ರೀತಿಯ ನಿಗೂಢ ಕಾಯಿಲೆ H9N2 ಪ್ರಕರಣಗಳು ಚೀನಾದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಸ್ಪತ್ರೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಚೀನಾದಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣ ಜಗತ್ತಿಗೆ ಆತಂಕ ಹೆಚ್ಚಾಗಿದೆ. ಆದರೆ, ಈ ಸೋಂಕು ಪ್ರಕರಣದ ಕುರಿತು ಭಾರತ ತೀವ್ರ ನಿಗಾ ವಹಿಸಿದೆ. ಹೆಚ್9ಎನ್2 ವೈರಸ್‌ನಿಂದ ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ ಅನ್ನೋದನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಇದರ ಬೆನ್ನಲ್ಲೇ ಯಾವುದೇ ಸಂದರ್ಭ ಎದುರಿಸಲು ಸಿದ್ದ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇಷ್ಟೇ ಅಲ್ಲ ಎಲ್ಲಾ ಆಸ್ಪತ್ರಗಳ ಸನ್ನದ್ಧತೆಯನ್ನು ಆಯಾ ರಾಜ್ಯಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದೆ.
ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮ
ಬೆಡ್, ವೆಂಟಿಲೇಟರ್, ಔಷಧಿ, ಲಸಿಕೆ, ತುರ್ತು ನಿಘಾ ಘಟಕ ವ್ಯವಸ್ಥೆಗಳು, ವೈದ್ಯಕೀಯ ಸಲಕರಣೆ, ಆಕ್ಸಿಜನ್ ಸೇರಿದಂತೆ ಆಸ್ಪತ್ರೆಯ ಸನ್ನದ್ಧತೆಯನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಪರಿಶೀಲನೆ ನಡೆಸಬೇಕು. ಭಾರತ ಯಾವುದೇ ಸವಾಲು ಎದುರಿಸಲು ಸಜ್ಜಾಗಿದೆ. ಸೋಂಕು ಭಾರತದಲ್ಲಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಆದರೆ ಮುನ್ನಚ್ಚೆರಿಕೆ ಕ್ರಮವಾಗಿ ಎಲ್ಲಾ ಆಸ್ಪತ್ರೆಗಳು ಸನ್ನದ್ಧವಾಗಿರಬೇಕು. ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.