ವಿಜಯಪುರ : ನನ್ನ ಪ್ರಶ್ನೆಗಳಿಗೆ ಉತ್ತರಿಸದೇ ರಾಜ್ಯ ಸರ್ಕಾರ ನಿರುತ್ತರವಾಗಿದೆ ಎಂದು ಲೇವಡಿ ಮಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಅತೀವ ದುಃಖವಾಗಿದೆ. ಈಗ ನೋವು ಹೊರಗೆ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ಪಾಪ.. ಅವರ ಪರಿಸ್ಥಿತಿ ನನಗೆ ಅರ್ಥ ಆಗುತ್ತೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಗುತ್ತೆ. ನಮ್ಮನ್ನು ಬಿಟ್ಟು ಯಾರೂ ಅಧಿಕಾರ ಹಿಡಿಯಲು ಆಗಲ್ಲ ಅಂತ ಬಹಳ ಅಪೇಕ್ಷೆ ಪಟ್ಟಿದ್ದರು. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಸಂಪೂರ್ಣ ಅಧಿಕಾರ ಕೊಟ್ಟರು. ಹೀಗಾಗಿ, ಸ್ವಾಭಾವಿಕವಾಗಿ ಕುಮಾರಸ್ವಾಮಿಗೆ ದುಃಖ ಆಗಿದೆ. ಈಗ ಹೊರಗೆ ತೆಗೆಯುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನವ್ರು ಹೇಗೆ ಕಾರಣ?
ಜಾತಿ ಗಣತಿ ಮೂಲ ಪ್ರತಿ ನಾಪತ್ತೆ ವಿಚಾರವಾಗಿ ಮಾತನಾಡಿದ ಅವರು, 2021ರಲ್ಲಿ ವರದಿ ನಾಪತ್ತೆ ಆಗಿದೆ ಅಂತ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. 2021ರಲ್ಲಿ ಯಾರು ಅಧಿಕಾರದಲ್ಲಿದ್ರು? ಬಿಜೆಪಿ ಅಧಿಕಾರದಲ್ಲಿದ್ದಾಗ ನಾಪತ್ತೆಯಾಗಿದ್ರೆ, ಕಾಂಗ್ರೆಸ್ ನವರು ಹೇಗೆ ಕಾರಣ ಆಗ್ತಾರೆ? ಎಲ್ಲದಕ್ಕೂ ಕಾಂಗ್ರೆಸ್ ಕಾರಣನಾ? ಎಂದು ಬಿಜೆಪಿಗರ ಆರೋಪಕ್ಕೆ ಟಾಂಗ್ ಕೊಟ್ಟಿದ್ದಾರೆ.
ಆ ಪತ್ರದ ಬಗ್ಗೆ ನನಗೆ ಗೊತ್ತಿಲ್ಲ
ಈ ಬಗ್ಗೆ ಅಧಿಕಾರಿಗಳು, ಸಚಿವರ ಗಮನದಲ್ಲಿರುತ್ತೆ. ಆ ಬಗ್ಗೆ ನಾವು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ. ಅದರ ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡಬೇಕಾಗುತ್ತೆ. ಜಯಪ್ರಕಾಶ್ ಹೆಗ್ಡೆ ಅವರ ಪತ್ರದ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮದವರು ಹೇಳಿದ ಮೇಲೆಯೇ ಮಾತನಾಡುತ್ತಿದ್ದೇನೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.