Wednesday, December 18, 2024

ಡಿಕೆಶಿ ಸಿಬಿಐ ಪ್ರಕರಣ ವಾಪಸ್ : ಕೋರ್ಟ್​ಗೆ ಹೋಗುತ್ತೇನೆಂದ ಯತ್ನಾಳ್​

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ  ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್​ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ, ಕಾಂಗ್ರೆಸ್​​ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ವಾಗ್ದಾಳಿ ಮಾಡಿದ್ದಾರೆ.

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಈ ಕುರಿತು ಎಕ್ಸ್​ (ಟ್ವಿಟರ್​​) ನಲ್ಲಿ “ಪ್ರಕರಣವನ್ನು ಹಿಂಪಡೆದಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ. ಭ್ರಷ್ಟಾಚಾರ ಪ್ರಕರಣ ಹಿಂಪಡೆಯಲು ಸರ್ಕಾರ ಮರು ಪರಿಶೀಲಿಸಬೇಕು” ಎಂದು ಬರೆದುಕೊಂಡಿದ್ದಾರೆ.

 

ಯತ್ನಾಳ್‌ ಟ್ವೀಟ್‌ನಲ್ಲೇನಿದೆ?

ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಕೀಲರಾಗಿ ಅವರ ಹಲವು ಭ್ರಷ್ಟಾಚಾರದ ಪ್ರಕರಣವನ್ನು ಕೈಗೆತ್ತುಕೊಂಡು ವಾದ ಮಂಡಿಸಿದ್ದರು.

ದುರಂತದ ವಿಷಯವೇನೆಂದರೆ, ಸರ್ಕಾರದ ಪ್ರಭಾವಿ ರಾಜಕಾರಣಿಯ ಖಾಸಗಿ ವಕೀಲರು ಅಡ್ವೋಕೇಟ್ ಜನರಲ್ ಆಗಿ ಡಿ.ಕೆ.ಶಿವಕುಮಾರ್ ಮೇಲೆ ನಡೆಯುತ್ತಿದ್ದ ಸಿ.ಬಿ.ಐ ತನಿಖೆಗೆ ಸರ್ಕಾರದ ಅನುಮತಿ ಹಿಂಪಡೆಯಬೇಕೆಂದು ಸಂಪುಟಕ್ಕೆ ಶಿಫಾರಸು ಮಾಡುತ್ತಾರೆ.

ಈ ಶಿಫಾರಸಿನ ಕಾನೂನಿನ ಮಾನ್ಯತೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗದೆ ಅಂಗೀಕೃತವಾಗುತ್ತದೆ. ಇದು ಒಂದು ನಿಷ್ಪಕ್ಷಪಾತವಾದ ತನಿಖೆಗೆ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೋರಿ ಮಾಡಿದ ಪ್ರಹಸನ. ನ್ಯಾಷನಲ್ ಲಾ ಸ್ಕೂಲ್ ನ ‘ಪ್ರತಿಭೆ’ ಶಶಿಕಿರಣ್ ಅವರು ಈ ರೀತಿ contradictory ಆಗಿ ಜವಾಬ್ದಾರಿಗಳನ್ನು (roles ) ಮಾಡಬಾರದು.

ಕಾನೂನು ವ್ಯವಸ್ಥೆಯ ಅಣಕ ಮಾಡುವುದು (Mockery of Justice) ಕೆಲ ಪ್ರಭಾವಿ ರಾಜಕಾರಣಿಗಳಿಗೆ ಅಭ್ಯಾಸ ಆಗಿರುವುದು ದುರಂತ. ಸಚಿವ ಸಂಪುಟದಲ್ಲಿರುವ ಯಾವುದೇ ಸಚಿವರು ಇದು ಚರ್ಚೆಯಾಗಬೇಕು ಎಂದು ಹೇಳದೆ, ಇದಕ್ಕೆ ಒಪ್ಪಿಗೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತದೆ. ಇವರು ಯಾವುದೇ ತಪ್ಪು ಮಾಡಿಲ್ಲವೆಂದರೆ, ಸಿ.ಬಿ.ಐ ಮೇಲೆ ಭಯ ಏಕೆ ?

ರಾಜ್ಯದ ಅಧೀನದಲ್ಲಿರುವ ಪೊಲೀಸರಿಗೆ ಒಪ್ಪಿಸಿದರೆ ಒಬ್ಬ ಪ್ರಭಾವಿ ರಾಜಕಾರಣಿಯ ಕರ್ಮಕಾಂಡವನ್ನು ಸುಲಭವಾಗಿ ಮುಚ್ಚಿಹಾಕಬಹುದು ಎಂದು ಇವರ ಯೋಜನೆ ಎಂಬುದು ಗೊತ್ತಿರುವ ವಿಷಯ.

ಖಾಸಗಿ ವಕೀಲರನ್ನು ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಿಸಿದ್ದು ಮತ್ತು ಇದೆ ಪ್ರಕರಣವನ್ನು ಅವರು ಶಿಫಾರಸು ಮಾಡುತ್ತಾರೆ ಎಂದರೆ ಇದು Contradiction ಆಗುವುದಿಲ್ಲವೇ” ಎಂದು ಪ್ರಶ್ನೆ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES