ಬಾಗಲಕೋಟೆ : ನಾನು ಲಾಯರ್ ಆಗಿದ್ರೆ, ಸಿಎಂ ಆಗಿದ್ರೆ ಅದು ನಾನು ಸ್ವಂತ ಶಕ್ತಿಯಿಂದ ಆಗಿಲ್ಲ. ಜನರ ಆಶೀರ್ವಾದ ಸಿಎಂ ಆಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವೀಣಾ ವಿ. ಕಾಶಪ್ಪನವರ್ ಫೌಂಡೇಶನ್ ಹಮ್ಮಿಕೊಂಡಿದ್ದ ಉಚಿತ ಕೆ.ಎ.ಎಸ್ ಮತ್ತು ಪಿ.ಎಸ್.ಐ ಪರೀಕ್ಷೆಯ ತರಬೇತಿ ಕೇಂದ್ರ ಮತ್ತು ಅಕಾಡೆಮಿಯನ್ನು ಉದ್ಘಾಟಿಸಿ ಮಾತನಾಡಿದರು. ಜನರೇ ಪ್ರಜಾಪ್ರಭುತ್ವದಲ್ಲಿ ಮಾಲೀಕರು. ಜನರ ಆಶೀರ್ವಾದ ಸಿಕ್ಕರೆ ಕುರ್ಚಿ ಸಿಗುತ್ತೆ. ಜನರ ಆಶೀರ್ವಾದ ರಾಜಕಾರಣಿಗಳು, ಸ್ವಾಮೀಜಿಗಳಿಗೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೆವು. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆ ಕೊಟ್ಟಿದ್ದೆವು. ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ನಾಲ್ಕು ಗ್ಯಾರಂಟಿ ಜಾರಿಗೆ ತಂದಿದ್ದೀವಿ. ನಮ್ಮ ವಿರೋಧಿಗಳು ಗ್ಯಾರಂಟಿಗಳನ್ನು ತಂದ್ರೆ ರಾಜ್ಯ ದಿವಾಳಿ ಆಗುತ್ತೆ ಅಂದ್ರು. ಈಗ ರಾಜ್ಯ ದಿವಾಳಿ ಆಗಿದಿಯಾ? ಎಂದು ಪ್ರಶ್ನೆ ಮಾಡಿದರು.
ಎಲ್ಲರಿಗೂ ಗ್ಯಾರಂಟಿ ಕೊಡುತ್ತಿದ್ದೇವೆ
38 ಸಾವಿರ ಕೋಟಿ ಗ್ಯಾರಂಟಿಗಳಿಗೆ ಖರ್ಚು ಮಾಡಿದ್ದೀವಿ. ಗೃಹಲಕ್ಷ್ಮೀ ಯೋಜನೆಗೆ ಈ ವರ್ಷ 18 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಆರ್ಥಿಕವಾಗಿ ದುರ್ಬಲರಾಗಿರೋರಿಗೆ ಶಕ್ತಿ ತುಂಬುವುದೇ ಸಂವಿಧಾನದ ಆಶಯ. ಎಲ್ಲ ಜಾತಿಯವರಿಗೂ ಸಮಾನವಾಗಿ ಗ್ಯಾರಂಟಿ ಕೊಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಬಸವಾದಿ ಶರಣರು. ಇದನ್ನೇ ನಾವು ಮಾಡೋಕೆ ಹೊರಟಿರೋದು ಎಂದು ಹೇಳಿದರು.
ನೀವು ಖುಷಿಯಾಗಿದ್ದೀರಾ ತಾನೆ
ವಿರೋಧಿಗಳು ಟೀಕೆ ಮಾಡಬಹುದು. ಗೃಹಲಕ್ಷ್ಮೀ ಯೋಜನೆಯಲ್ಲಿ 1.17 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಹಣ ಕೊಡುತ್ತಿದ್ದೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದೇವೆ. ಈವರೆಗೆ 100 ಕೋಟಿಗೂ ಅಧಿಕ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದನ್ನೂ ಟೀಕೆ ಮಾಡ್ತಾರೆ, ನೀವು ಖುಷಿಯಾಗಿದ್ದೀರಾ ತಾನೆ ಎಂದು ಸಮಾರಂಭದಲ್ಲಿದ್ದವರನ್ನು ಸಿಎಂ ಸಿದ್ದರಾಮಯ್ಯ ಕೇಳಿದರು.