ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಆರು ತಿಂಗಳಲ್ಲಿ ಟ್ರಾನ್ಸ್‌ಫರ್ ದಂಧೆ, ಬರ, ಸ್ವಜನ ಪಕ್ಷಪಾತ ನಡೆಯುತ್ತಿದೆ. ಇದು ಕಪ್ಪು ಚುಕ್ಕೆ ಆಗಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ತೀವಿ. ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡ್ತೀವಿ. ಸದನದ ಹೊರಗೂ ಹೋರಾಟ ಮಾಡ್ತಿವಿ. ಅಧಿವೇಶನದ ಬಳಿಕ ಟ್ರಾನ್ಸ್‌ಫರ್ ದಂಧೆ, ಐಟಿ ದಾಳಿಯಲ್ಲಿ ಹಣ ಪತ್ತೆ ವಿವಿಧ ವಿಚಾರ ಇಟ್ಟುಕೊಂಡು ಹೋರಾಟ ಮಾಡ್ತೀವಿ. ಕೇಂದ್ರ ಹಾಗೂ ರಾಜ್ಯದ ನಾಯಕರ ಜೊತೆ ನಿಲ್ಲುತ್ತೇವೆ ಎಂದು ಹೇಳಿದರು.
ನಮ್ಮ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಲ್. ಸಂತೋಷ್, ರಾಜ್ಯದ ಪ್ರಮುಖ ನಾಯಕರಾದ ಬಿ.ಎಸ್ ಯಡಿಯೂರಪ್ಪ, ಬೊಮ್ಮಾಯಿ ಎಲ್ಲರೂ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ನನ್ನ ಆಯ್ಕೆ ಮಾಡಿದ್ದಾರೆ. ಬಿ.ವೈ. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಹಾಗೂ ನನ್ನ ವಿಪಕ್ಷ ನಾಯಕ ಮಾಡಿದ್ದಾರೆ. ಕೊಠಡಿ ಪೂಜೆ ಮಾಡಿ ಅಧಿಕೃತವಾಗಿ ವಿಪಕ್ಷ ನಾಯಕನಾಗಿದ್ದೇನೆ ಎಂದು ತಿಳಿಸಿದರು.
ವಾರದಲ್ಲಿ ಎಲ್ಲವೂ ಸರಿ ಹೋಗಲಿದೆ
ಮಾಜಿ ಸಚಿವ ವಿ. ಸೋಮಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಸೋಮಣ್ಣ ಹಿರಿಯರು. ಅವರ ಬಗ್ಗೆ ನಮ್ಮ ಪಕ್ಷದ ಪ್ರಮುಖರು ಮಾತನಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಎಲ್ಲವೂ ಸರಿ ಹೋಗಲಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಮೇಶ್ ಜಾರಕಿಹೊಳಿ ಮನೆಗೆ ಹೋಗಿದ್ದರು. ಅವರ ಜೊತೆ ಮಾತನಾಡಿದ್ದಾರೆ. ಸಿ.ಟಿ. ರವಿ ಅವರ ಜೊತೆಯೂ ಮಾತನಾಡಿದ್ದಾರೆ, ಅವರು ಕೂಡ ಶುಭ ಕೋರಿದ್ದಾರೆ ಎಂದು ಆರ್. ಅಶೋಕ್ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದರು.