Friday, November 22, 2024

ಪರೀಕ್ಷಾಅಕ್ರಮಗಳನ್ನು ಎಸಗುವವರಿಗೆ ಇನ್ನುಂದೆ ₹10 ಕೋಟಿ ದಂಡ

ಬೆಂಗಳೂರು: ರಾಜ್ಯದಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ₹ 10 ಕೋಟಿಯವರೆಗೆ ದಂಡ ಮತ್ತು 12 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ‘ಸಾರ್ವಜನಿಕ ಪರೀಕ್ಷಾ ಅಕ್ರಮ ನಿಯಂತ್ರಣ ಮಸೂದೆ’ಗೆ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ ನಿರಂತರವಾಗಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಲೇ ಇವೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಇತ್ತೀಚೆಗೆ ನಡೆದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಯಲ್ಲೂ ಅಕ್ರಮ ನಡೆದಿತ್ತು. ಇಂತಹ ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ರೂಪಿಸಿರುವ ‘ಕರ್ನಾಟಕ ಸಾರ್ವಜನಿಕ ಪರೀಕ್ಷೆ ಮಸೂದೆ 2023ಕ್ಕೆ ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಇಂತಹ ಪ್ರಕರಣಗಳ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೂ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

ಈ ಅಪರಾಧಗಳನ್ನು ಮಾಡುವಂತಿಲ್ಲ 

ಪರೀಕ್ಷೆಯಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಗಳ ಸೋರಿಕೆ, ಉತ್ತರ ಪತ್ರಿಕೆ ಮತ್ತು ಒಎಂಆರ್ ಹಾಳೆಗಳನ್ನು ತಿದ್ದುವುದು, ಲಿಖಿತ ಅಥವಾ ವಿದ್ಯುನ್ಮಾನ ಅಥವಾ ಯಾಂತ್ರೀಕೃತ ಸಾಧನ/ ಉಪಕರಣ ಬಳಸುವುದು, ಪರೀಕ್ಷಾ ಕೇಂದ್ರದೊಳಕ್ಕೆ ಅಕ್ರಮ ಪ್ರವೇಶ ಮಾಡುವುದು, ಅನಧಿಕೃತ ಸ್ಥಳಗಳಲ್ಲಿ ಪರೀಕ್ಷೆ ಬರೆಸುವುದು ಸೇರಿದಂತೆ ಯಾವುದೇ ಬಗೆಯ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವುದನ್ನು ಶಿಕ್ಷಾರ್ಹ ಅಪರಾಧ ಎಂದು ಈ ಮಸೂದೆಯು ಘೋಷಿಸಲಿದೆ.

ಆಕ್ರಮ ಮಾಡಿದವರಿಗೆ ದಂಡವೆಷ್ಟು..?

ನಕಲು ಅಥವಾ ಹೊರಗಿನಿಂದ ಸಹಾಯ ಪಡೆದು ಪರೀಕ್ಷಾ ಅಕ್ರಮ ಎಸಗುವ ಅಭ್ಯರ್ಥಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 10 ಲಕ್ಷ ದಂಡ ವಿಧಿಸುವ ಪ್ರಸ್ತಾವ ಮಸೂದೆಯ ಸೆಕ್ಷನ್ 10 (1)ರಲ್ಲಿದೆ. ಅಭ್ಯರ್ಥಿಯೂ ಸೇರಿದಂತೆ ಯಾವುದೇ ವ್ಯಕ್ತಿ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಪ್ರಯತ್ನಿಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದು, ಸೋರಿಕೆಗೆ ಪ್ರಯತ್ನಿಸುವುದು, ಅಕ್ರಮವಾಗಿ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಅಕ್ರಮವಾಗಿ ಉತ್ತರ ಬರೆಯುವುದು ಅಥವಾ ಬರೆಯಲು ನೆರವಾಗುವುದು. ನೆರವು ಕೋರುವುದು ಸೇರಿದಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರೀಕ್ಷಾ ಅಕ್ರಮಕ್ಕೆ ನೆರವು ನೀಡುವವರಿಗೆ ಎಂಟರಿಂದ 12 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 15 ಲಕ್ಷದಿಂದ ₹ 10 ಕೋಟಿಯವರೆಗೂ ದಂಡ ವಿಧಿಸುವ ಪ್ರಸ್ತಾವ ಸೆಕ್ಷನ್ 10 (2)ರಲ್ಲಿದೆ.

ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಅಭ್ಯರ್ಥಿಗಳು ಮುಂದಿನ ಎರಡು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಪರೀಕ್ಷೆಯನ್ನು ತೆಗೆದುಕೊಳ್ಳದಂತೆ ಅನರ್ಹಗೊಳಿಸುವ ಪ್ರಸ್ತಾವವು ಸೆಕ್ಷನ್ 11 (2)ರಲ್ಲಿದೆ.
ಯಾವುದೇ ಸಂಸ್ಥೆ ಅಥವಾ ಅದರ ಆಡಳಿತ ಮಂಡಳಿಯು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದರೆ ಆ ಪರೀಕ್ಷೆಯ ಸಂಪೂರ್ಣ ವೆಚ್ಚವನ್ನು ಅಂತಹ ಸಂಸ್ಥೆ/ ಆಡಳಿತ ಮಂಡಳಿಯಿಂದಲೇ ವಸೂಲಿ ಮಾಡಲು ಸೆಕ್ಷನ್ 13 ಅವಕಾಶ ಕಲ್ಪಿಸಲಿದೆ.

RELATED ARTICLES

Related Articles

TRENDING ARTICLES